For the best experience, open
https://m.newskannada.com
on your mobile browser.
Advertisement

ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ಬಂದಿದೆ ಹಸಿರು ಕಳೆ 

ಬೇಸಿಗೆಯ ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ವರುಣನ ಕೃಪೆಯಿಂದ ಹಸಿರು ಕಳೆ ಬಂದಿದೆ.  ಜನವರಿಯಿಂದ ಏಪ್ರಿಲ್ ತನಕವೂ ಮಳೆ ಸುರಿಯದ ಕಾರಣದಿಂದ ಗಿಡಮರಗಳು ಬಿಸಿಲಿನ ತಾಪಕ್ಕೆ ಬೋರಲಾಗಿದ್ದವು. ಆದರೀಗಕಳೆದ ಕೆಲವು ದಿನಗಳಿಂದ ಪ್ರತಿದಿನವೂ ಮಳೆ ಸುರಿಯುತ್ತಿರುವುದರಿಂದ ಇಡೀ ಬೆಟ್ಟ ಹಸಿರಿಗೆ ಮರಳಿದ್ದು ಸುಂದರ ಹಸಿರಲೋಕ ಸೃಷ್ಟಿಯಾಗಿದ್ದು, ನೋಡಲು ಖುಷಿ ನೀಡುತ್ತಿದೆ.
03:16 PM May 19, 2024 IST | Ashika S
ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ಬಂದಿದೆ ಹಸಿರು ಕಳೆ 

ಮೈಸೂರು: ಬೇಸಿಗೆಯ ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ವರುಣನ ಕೃಪೆಯಿಂದ ಹಸಿರು ಕಳೆ ಬಂದಿದೆ.  ಜನವರಿಯಿಂದ ಏಪ್ರಿಲ್ ತನಕವೂ ಮಳೆ ಸುರಿಯದ ಕಾರಣದಿಂದ ಗಿಡಮರಗಳು ಬಿಸಿಲಿನ ತಾಪಕ್ಕೆ ಬೋರಲಾಗಿದ್ದವು. ಆದರೀಗಕಳೆದ ಕೆಲವು ದಿನಗಳಿಂದ ಪ್ರತಿದಿನವೂ ಮಳೆ ಸುರಿಯುತ್ತಿರುವುದರಿಂದ ಇಡೀ ಬೆಟ್ಟ ಹಸಿರಿಗೆ ಮರಳಿದ್ದು ಸುಂದರ ಹಸಿರಲೋಕ ಸೃಷ್ಟಿಯಾಗಿದ್ದು, ನೋಡಲು ಖುಷಿ ನೀಡುತ್ತಿದೆ.

Advertisement

ಇದೀಗ ಮಳೆಮೋಡದ ಜತೆಗೆ ಬೆಳಿಗ್ಗೆ ಮಂಜು ಆವರಿಸಿಕೊಳ್ಳುತ್ತಿರುವುದರಿಂದ ಮುಂಜಾನೆಯ ಸುಂದರ ಕ್ಷಣಗಳು ಮೈಮನಕ್ಕೆ ಮುದನೀಡುತ್ತಿದೆ. ಈಗ ಚಾಮುಂಡಿಬೆಟ್ಟ ಹಸಿರು ಹಚ್ಚಡದೊಂದಿಗೆ ಕಂಗೊಳಿಸುತ್ತಿದ್ದು, ನಿಸರ್ಗ ಪ್ರಿಯರನ್ನು ತನ್ನಡೆಗೆ ಸೆಳೆಯುತ್ತಿದೆ. ಚುಮುಚುಮು ಬೆಳಕಿನಲ್ಲಿ ತಣ್ಣಗೆ ಬೀಸುವ ತಂಗಾಳಿಯಲಿ ಮುತ್ತಿಕ್ಕುವ ಮಂಜಿ ಹೆಜ್ಜೆಯಿಡುತ್ತಾ ಖುಷಿಪಡುವುದು  ಎಲ್ಲಿಲ್ಲದ ಮಜಾ.. ಅದರಲ್ಲೂ ಚಿಲಿಪಿಲಿ ಗುಟ್ಟುವ ಹಕ್ಕಿಗಳು. ಕಣ್ಣು ಹಾಯಿಸಿದುದ್ದಕ್ಕೂ ಹಸಿರ ನೋಟ.. ಹೊಸದೊಂದು ಅನುಭವ ನೀಡುತ್ತಿದೆ.

ಕಾಡಿನ ನಡುವೆ ನಿರ್ಮಿಸಿದ ಮೆಟ್ಟಿಲಲ್ಲಿ ಸಾಗುತ್ತಾ ಅಲ್ಲಲ್ಲಿ ಇರುವ ನಿಸರ್ಗ ನಿರ್ಮಿತ ವೀಕ್ಷಣಾ ತಾಣ(ವ್ಯೂಪಾಯಿಂಟ್) ಗಳಿಂದ ನಿಂತು ಒಮ್ಮೆ ಕಣ್ಣು ಹಾಯಿಸಿದರೆ ಕಾಣಸಿಗುವ ಮೈಸೂರು ನಗರದ ನೋಟ ಮುದನೀಡುತ್ತದೆ. ಜತೆಗೆ ನಿಸರ್ಗದ ನಡುವೆ  ಪ್ರಶಾಂತ ವಾತಾವರಣದಲ್ಲಿ ಒಂದಷ್ಟು ಹೊತ್ತು ಕಳೆದು ಹೋದರೆ  ನಿತ್ಯದ ಜಂಜಾಟಗಳ ನಡುವೆಯೂ ಮನಸ್ಸು ಹಗುರವಾಗುತ್ತದೆ.

Advertisement

ಪ್ರಕೃತಿಯ ನಡುವೆ ಒಂದಷ್ಟು ಹೊತ್ತನ್ನು ಕಳೆಯುವ ಮೂಲಕ ಒಂದೊಳ್ಳೆಯ ಗಾಳಿ ಬೆಳಕಿಗೆ ಮೈಯೊಡ್ಡಿ ಮಾನಸಿಕ ಮತ್ತು  ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದನ್ನೇ ರೂಢಿ ಮಾಡಿಕೊಂಡಿರುವ ಬಹಳಷ್ಟು ಮಂದಿ ಮುಂಜಾನೆ ತಪ್ಪದೇ ಇಲ್ಲಿಗೆ ಬಂದೇ ಬರುತ್ತಾರೆ. ಹೀಗೆ ಬಂದವರು ದೂರದಿಂದಲೇ ಹಚ್ಚಹಸಿರು ಹೊದ್ದು ಮಲಗಿದಂತೆ ಕಾಣುವ ಚಾಮುಂಡಿ ಬೆಟ್ಟದ ವಿಹಂಗಮ ನೋಟ ಅದರ ಮೇಲೆ ಮಂಜಿನ ತೆರೆಯ ನಾಗಾಲೋಟವನ್ನು ಮನಸಾರೆ ಸವಿಯುತ್ತಾರೆ. ನಸುಕಿನಲ್ಲಿ ಒಬ್ಬರಿಗೊಬ್ಬರು ಕಾಣದಷ್ಟು ದಟ್ಟವಾದ ಮಂಜಿನಲ್ಲಿ ಬೀಸುವ ತಂಗಾಳಿಯಲ್ಲಿ ಚಾಮುಂಡಿಬೆಟ್ಟದಲ್ಲಿ ಅಡ್ಡಾಡುವುದೆಂದರೆ ಎಲ್ಲಿಲ್ಲದ ಮಜಾ ನೀಡುತ್ತಿದೆ.

ಚಾಮುಂಡಿಬೆಟ್ಟವೇರುತ್ತಾ ಹೋದಂತೆ ಅಲ್ಲಿಂದ ಕಾಣಸಿಗುವ ಮೈಸೂರು ನಗರದ ನೋಟ ಕಣ್ಣಿಗೆ ಸೋಜಿಗವನ್ನುಂಟು  ಮಾಡುತ್ತಿದೆ. ಇಡೀ ಮೈಸೂರು ನಗರ ಬೆಳಗಿಟ್ಟ ಬೆಳ್ಳಿಯ ಪಾತ್ರೆಗಳಂತೆ ಕಂಗೊಳಿಸುತ್ತದೆ. ಮುಂಜಾನೆಯ ಮಂಜಿನ ತೆರೆಯ ನಡುವಿನ ರವಿಯ ಕಿರಣಗಳ ನರ್ತನ ವರ್ಣಿಸಲಾಗದ ಅನುಭವ ನೀಡುತ್ತದೆ.

Advertisement
Tags :
Advertisement