For the best experience, open
https://m.newskannada.com
on your mobile browser.
Advertisement

ಸರಗೂರು: ಸಡಗರ ಸಂಭ್ರಮದ ಚಿಕ್ಕದೇವಮ್ಮನವರ ಜಾತ್ರೆ

ತಾಲ್ಲೂಕಿನ ಕಲ್ಲಂಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಸೋಮವಾರ ಆರಂಭಗೊಂಡ ಶ್ರೀ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ಅತ್ಯಂತ ವಿಜೃಂಭಣೆಯಿಂದ ನಡೆಯುವುದರೊಂದಿಗೆ ಸಂಪನ್ನಗೊಂಡಿದೆ.
12:15 PM Dec 28, 2023 IST | Ashika S
ಸರಗೂರು  ಸಡಗರ ಸಂಭ್ರಮದ ಚಿಕ್ಕದೇವಮ್ಮನವರ ಜಾತ್ರೆ

ಸರಗೂರು: ತಾಲ್ಲೂಕಿನ ಕಲ್ಲಂಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಸೋಮವಾರ ಆರಂಭಗೊಂಡ ಶ್ರೀ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ಅತ್ಯಂತ ವಿಜೃಂಭಣೆಯಿಂದ ನಡೆಯುವುದರೊಂದಿಗೆ ಸಂಪನ್ನಗೊಂಡಿದೆ.

Advertisement

ಧಾರ್ಮಿಕ ದತ್ತಿ ಇಲಾಖೆ ಹಾಗೂ ಸಮಿತಿ ವತಿಯಿಂದ ನಡೆದ ಜಾತ್ರೆಯಲ್ಲಿ ಶ್ರೀ  ಚಿಕ್ಕದೇವಮ್ಮನವರ ಉತ್ಸವ ಮೂರ್ತಿಯನ್ನು ವಿವಿಧ ಬಗೆಯ ಹೂವಿನಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಸಂಪ್ರದಾಯದಂತೆ ಪೂಜೆ ಕೈಂಕರ್ಯ ನೆರವೇರಿಸಿ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಶ್ರೀ ಚಿಕ್ಕದೇವಮ್ಮ  ಬೆಟ್ಟದಿಂದ ಸೋಮವಾರ ಮಧ್ಯರಾತ್ರಿ 12 ಗಂಟೆಗೆ ಹೊರಟ ಮೆರವಣಿಗೆಯು ಕುಂದೂರು ಗ್ರಾಮಕ್ಕೆ ಬರುವಷ್ಟರಲ್ಲಿ ಮಂಗಳವಾರ ಬೆಳಗಿನ ಜಾವ 3 ಗಂಟೆಯಾಯಿತು. ಆ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ  ಸತ್ತಿಗೆ ಸುರಪಾಣಿ, ವಾಧ್ಯಗೋಷ್ಠಿಯೊಂದಿಗೆ  ಮೆರವಣಿಗೆ  ನಡೆಯಿತು. ಈ ವೇಳೆ ಗ್ರಾಮದ ಭಕ್ತಾಧಿಗಳು ಭಕ್ತಿ ಭಾವದಿಂದ  ಶ್ರೀ ಚಿಕ್ಕದೇವಮ್ಮ ತಾಯಿಗೆ ಪೂಜೆ ಸಲ್ಲಿಸಿ ತಾಯಿಯ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತಲ್ಲದೆ,  ಗ್ರಾಮದ ಪ್ರಮುಖ ಬೀದಿಗಳಿಗೆ  ಬಣ್ಣ, ಬಣ್ಣದ ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು.

Advertisement

ಇದೇ ಸಂದರ್ಭ ಜಾತ್ರಾ ಮೈದಾನದಲ್ಲಿ ಪೌರಾಣಿಕ ನಾಟಕವನ್ನು ಏರ್ಪಡಿಸಿದ್ದರಿಂದ  ಸುತ್ತಮುತ್ತಲಿನ ಗ್ರಾಮಸ್ಥರು ನಾಟಕವನ್ನು ವೀಕ್ಷಣೆ ಮಾಡಿದರು. ಶ್ರೀ ಚಿಕ್ಕದೇವಮ್ಮ ತಾಯಿ ರಾಕ್ಷಸನನ್ನು ಸಂಹರಿಸುವ ಭಾವಚಿತ್ರವನ್ನು  ಸಾವಿರಾರು ಭಕ್ತಾಧಿಗಳು ಕಣ್ತುಂಬಿಕೊಂಡರು.

ಮಂಗಳವಾರ ಬೆಳಗಿನ ಜಾವ ಐದರಿಂದ ಆರು ಗಂಟೆಯ ಬ್ರಾಹ್ಮಿ ಮೂಹೂರ್ತದಲ್ಲಿ ಕುಂದೂರು ಜಾತ್ರಾ ಮಾಳದಲ್ಲಿ ರಕ್ತ ಬೀಜಾಸುರ (ರಾಕ್ಷಸನ) ಚಿತ್ರಪಟದಲ್ಲಿ ತಾಯಿಯು ಸಂಹಾರ ಮಾಡಿ ಕಪಿಲಾ ನದಿಯಲ್ಲಿ ಅಮ್ಮನವರಿಗೆ ಮೈಲಿಗೆಯನ್ನು ವಿಸರ್ಜಿಸಿ, ನದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಂದೂರಿನ ಮಾಳದಲ್ಲಿರುವ ದೇವಸ್ಥಾನಕ್ಕೆ ಆಗಮಿಸಲಾಯಿತು.ನಂತರ ಬೆಳಿಗ್ಗೆ 5 ಗಂಟೆ ವೇಳೆಗೆ ತಾಯಿ ಶ್ರೀ ಚಿಕ್ಕದೇವಮ್ಮ ದೇವರ ಪಲ್ಲಕ್ಕಿಯನ್ನು ದೇವಸ್ಥಾನದ ಬಳಿ ಕೊಂಡೊಯ್ದರು.

ವಿಶೇಷವಾಗಿ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದ ನಂತರ ಅಕ್ಕ ಪಕ್ಕದ 25 ಕ್ಕೂ ಹೆಚ್ಚು ಗ್ರಾಮದ ಭಕ್ತಾಧಿಗಳು ಪೂಜೆ ಸಲ್ಲಿಸಿ  ತಾಯಿಯ ಆಶೀರ್ವಾದ ಪಡೆದುಕೊಂಡರು. ಮಂಗಳವಾರ ತಾಯಿಯ ಪಲ್ಲಕ್ಕಿ ಉತ್ಸವ ದಡದಹಳ್ಳಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.

ಇದೇ  ವೇಳೆ ಶಾಸಕ ಅನಿಲ್ ಚಿಕ್ಕಮಾದು,ತಹಶೀಲ್ದಾರ್ ರುಕೀಯಾ ಬೇಗಂ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಚಿಕ್ಕದೇವಮ್ಮನ ತಾಯಿ ದರ್ಶನ ಪಡೆದರು. ಗ್ರಾಪಂ ಅಧ್ಯಕ್ಷೆ ಭಾಗ್ಯಗೊವಿಂದನಾಯಕ, ಉಪಾಧ್ಯಕ್ಷೆ ಇಂದ್ರಾಣಿ ಅಣ್ಣಯ್ಯ ಸ್ವಾಮಿ, ಮುಖಂಡರಾದ ನಾಯಕ ಸಮಾಜದ ಶಂಭುಲಿಂಗನಾಯಕ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹೂವಿನಕೊಳ ಸಿದ್ಧರಾಜು, ಚಿಕ್ಕದೇವಮ್ಮನ ಬೆಟ್ಟದ ಧತ್ತಿ ಇಲಾಖೆ ಇಓ ರಘು, ಪಾರುಪತ್ತೇದಾರ ಮಹದೇವಸ್ವಾಮಿ, ಗ್ರಾಪಂ ಸದಸ್ಯರಾದ ದಡದಹಳ್ಳಿ ಚಿನ್ನಸ್ವಾಮಿ, ನಾಗಣ್ಣ, ಕುಂದೂರು ಮೂರ್ತಿ, ಶಿವರಾಜು, ಇನ್ನೂ ಮುಂತಾದ ಮುಖಂಡರು  ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ಜಾತ್ರಾ ವೇಳೆಯಲ್ಲಿ ಯಾವುದೇ ಆಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರಗೂರು ತಾಲ್ಲೂಕಿನ ಆರಕ್ಷಕ ವೃತ್ತ ನಿರೀಕ್ಷಕ  ಲಕ್ಷ್ಮೀಕಾಂತ್, ಸರಗೂರು ಆರಕ್ಷಕ ಉಪ ನಿರೀಕ್ಷಕ ಸಿ ನಂದೀಶ್ ಕುಮಾರ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.  ಈ ಜಾತ್ರಾ ಮಹೋತ್ಸವದಲ್ಲಿ ಕುಂದೂರು ಮತ್ತು ದಡದಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.

Advertisement
Tags :
Advertisement