For the best experience, open
https://m.newskannada.com
on your mobile browser.
Advertisement

ಇನ್ನೆರಡು ದಿನದಲ್ಲಿ ಕಾಂಗ್ರೆಸ್ ಅಂತಿಮ ಪಟ್ಟಿ ಬಿಡುಗಡೆ: ಮುಖ್ಯಮಂತ್ರಿ

ರಾಜ್ಯದಲ್ಲಿನ ಉಳಿದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಅಥವಾ ಮಂಗಳವಾರ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
10:17 PM Mar 24, 2024 IST | Ashika S
ಇನ್ನೆರಡು ದಿನದಲ್ಲಿ ಕಾಂಗ್ರೆಸ್ ಅಂತಿಮ ಪಟ್ಟಿ ಬಿಡುಗಡೆ  ಮುಖ್ಯಮಂತ್ರಿ

ಬೆಂಗಳೂರು : ರಾಜ್ಯದಲ್ಲಿನ ಉಳಿದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಅಥವಾ ಮಂಗಳವಾರ ಟಿಕೆಟ್  ಘೋಷಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರ ನಮಗೆ ಕಗ್ಗಂಟಾಗಿಲ್ಲ. ಒಂದೇ  ಬಾರಿ ತೀರ್ಮಾನ ಮಾಡಬಾರದು ಎಂದು ಹಂತ ಹಂತವಾಗಿ ಟಿಕೆಟ್ ಘೋಷಣೆ ಮಾಡಲಾಗುತ್ತದೆ. ಮೈಸೂರು-ಕೊಡಗು ಮತ್ತು ಚಾಮರಾಜನಗರ ಕ್ಷೇತ್ರಗಳನ್ನು ಮಾತ್ರವಲ್ಲ ರಾಜ್ಯದ 28 ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದೇನೆ. ಜತೆಗೆ ಈ ಎರಡು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ಪೀಕರಿಸಿದ್ದೇನೆ. ಎಲ್ಲ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸುತ್ತೇನೆ. ಈ ಬಾರಿ ನಾವು 20 ಕ್ಷೇತ್ರಗಳಲ್ಲಿ ಗೆದ್ದೆ ಗೆಲ್ಲುತ್ತೇವೆ. ಆದರೆ, 28 ಕ್ಷೇತ್ರ ಗೆಲ್ಲುತ್ತೇವೆ ಎಂದು ಬಿಜೆಪಿಯವರ ರೀತಿ ಸುಳ್ಳು ಹೇಳುವುದಿಲ್ಲ ಎಂದರು.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ನಮಗೆ ಅನುಕೂಲವಾಗಿದೆ. ಕಳೆದ ಬಾರಿ ನಾವು ಜೆಡಿಎಸ್ ಜತೆ ಹೋಗಿದ್ದು  ನಮಗೆ ಅನುಕೂಲ ಆಗಲಿಲ್ಲ. ಈ ಬಾರಿ ಜೆಡಿಎಸ್‌ನಿಂದ ಬಿಜೆಪಿಗೆ ನಷ್ಟವಾಗಲಿದೆ. ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುತ್ತವೆ. ನಾವು ನುಡಿದಂತೆ ನಡೆದಿದ್ದೇವೆ. ಅಧಿಕಾರಕ್ಕೆ ಬಂದ ಕೂಡಲೇ ನುಡಿದಂತೆ ಗ್ಯಾರಂಟಿ ಘೋಷಣೆ ಮಾಡಿದ್ದೇವೆ. 5 ಗ್ಯಾರಂಟಿಗಳಿಗೆ ಈ ವರ್ಷ 36 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಮುಂದಿನ ವರ್ಷಕ್ಕೆ 52 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದರು.

Advertisement

ಬಿಜೆಪಿ ನಾಯಕರ ರೀತಿ ನಾವು ಸುಳ್ಳು ಹೇಳಲ್ಲ. ಏನು ಹೇಳುತ್ತೇವೆ ಅದನ್ನು ಮಾಡುತ್ತೇವೆ. ಕಳೆದ ವಿಧಾನಸಭಾ  ಚುನಾವಣೆಯಲ್ಲೂ ಜನ ನಮ್ಮನ್ನು ಕೈ ಹಿಡಿದಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲೂ ನಮಗೆ ಆಶೀರ್ವಾದ ಮಾಡಲಿದ್ದಾರೆ. ತಮ್ಮ ಅಭ್ಯಾಸ ಬಲದಿಂದಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಅವರು ಎಂದೂ ನುಡಿದಂತೆ ನಡೆದಿಲ್ಲ. 2018ರಲ್ಲಿ 600 ಭರವಸೆ ನೀಡಿದ್ದರೂ ಶೇ.10ರಷ್ಟು ಈಡೇರಿಸಲಿಲ್ಲ. ನರೇಂದ್ರ ಮೋದಿ ಹೇಳಿದಂತೆ 15ಲಕ್ಷ ರೂ. ಹಣವನ್ನು ಎಲ್ಲರ ಅಕೌಂಟ್‌ಗಳಿಗೆ ಹಾಕಿದ್ದಾರಾ? 2 ಕೋಟಿ ಉದ್ಯೋಗ ಸೃಷ್ಟಿ ಆಯ್ತ? ರೈತರ ಆದಾರ ದ್ವಿಗುಣವಾಯಿತಾ? ಎಂದು ಪ್ರಶ್ನಿಸಿದರು. ಇಷ್ಟಾದರೂ ಜನ ಏಕೆ ಮೋದಿಯನ್ನು ನಂಬುತ್ತಾರೆ ಎಂದರು.

Advertisement
Tags :
Advertisement