ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟದ ಮಹಿಮೆ ಗೊತ್ತಾ?

ಜಿಲ್ಲೆಗೊಂದು ಸುತ್ತು ಹೊಡೆದರೆ ಹತ್ತು ಹಲವು ವಿಶೇಷತೆಗಳನ್ನೊಳಗೊಂಡ ತಾಣವು ನಮ್ಮನ್ನು ಸೆಳೆಯುತ್ತವೆ. ಬಹುತೇಕ ಕ್ಷೇತ್ರಗಳು ಗ್ರಾಮೀಣ ಪ್ರದೇಶದಲ್ಲಿದ್ದು, ತಮ್ಮದೇ ಆದ ವಿಶೇಷತೆಗಳಿಂದ ಗಮನಸೆಳೆಯುತ್ತವೆ. ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟವೂ ಒಂದಾಗಿದೆ.
11:23 AM Jan 06, 2024 IST | Gayathri SG

ಮೈಸೂರು: ಜಿಲ್ಲೆಗೊಂದು ಸುತ್ತು ಹೊಡೆದರೆ ಹತ್ತು ಹಲವು ವಿಶೇಷತೆಗಳನ್ನೊಳಗೊಂಡ ತಾಣವು ನಮ್ಮನ್ನು ಸೆಳೆಯುತ್ತವೆ. ಬಹುತೇಕ ಕ್ಷೇತ್ರಗಳು ಗ್ರಾಮೀಣ ಪ್ರದೇಶದಲ್ಲಿದ್ದು, ತಮ್ಮದೇ ಆದ ವಿಶೇಷತೆಗಳಿಂದ ಗಮನಸೆಳೆಯುತ್ತವೆ. ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟವೂ ಒಂದಾಗಿದೆ.

Advertisement

ತಿ.ನರಸೀಪುರದಿಂದ ಸುಮಾರು ಒಂಬತ್ತು ಕಿ.ಮೀ. ದೂರದಲ್ಲಿರುವ ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟವನ್ನು ಸಿದ್ದರಬೆಟ್ಟ, ಚಿದರವಳ್ಳಿ ಬೆಟ್ಟ ಎಂದು ಕೂಡ ಕರೆಯಲಾಗುತ್ತಿದೆ. ಬೃಹದಾಕಾರದ ಬಂಡೆಗಳಿಂದ ಕೂಡಿರುವುದು ಈ ಬೆಟ್ಟದ ವಿಶೇಷವಾಗಿದ್ದು, ಈ ತಾಣವು ನಿಸರ್ಗ ಸೌಂದರ್ಯವನ್ನು ಹೊದ್ದು ನಿಂತಿರುವ ಕಾರಣ ಪ್ರಕೃತಿ ಪ್ರೇಮಿಗಳಿಗೆ ಮುದ ನೀಡುವ ತಾಣವೂ ಆಗಿದೆ.

ಈ ಬೆಟ್ಟದ ತಪ್ಪಲಿನಲ್ಲಿ ನೆಲೆಸಿದ್ದ ಸಿದ್ದಿಪುರುಷರು ತಪಸ್ಸು ಮಾಡಿ ಸಿದ್ದಿಯನ್ನು ಪಡೆದರೆಂದೂ ಅದರಿಂದಲೇ ಈ ಬೆಟ್ಟಕ್ಕೆ ಸಿದ್ದಿಗಿರಿ, ಸಿದ್ದನಬೆಟ್ಟ ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ. ಬೆಟ್ಟದ ಪಕ್ಕದಲ್ಲಿ ಹಳ್ಳಿಯಿದ್ದು ಇದನ್ನು ಸಿದ್ದರಹಳ್ಳಿ ಎಂದು ಕೂಡ ಕರೆಯಲಾಗುತ್ತಿತ್ತು. ಆದರೆ ಕಾಲ ಕ್ರಮೇಣ ಸಿದ್ದರಹಳ್ಳಿ ಮುಂದೆ ಚಿದರವಳ್ಳಿ ಆಯಿತು ಇದೀಗ ಅದು ಚಿದ್ರಳ್ಳಿಯಾಗಿದೆ.

Advertisement

ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟವು ಅತಿ ಎತ್ತರವೂ ಇಲ್ಲದ, ದೊಡ್ಡ ಬೆಟ್ಟವೂ ಅಲ್ಲದ ಆದರೆ ಸುಂದರವಾದ ಬೆಟ್ಟವಾಗಿದೆ. ಈ ಬೆಟ್ಟ ಏಕೆ ಪ್ರಸಿದ್ಧಿ ಹೊಂದಿದೆ ಎನ್ನವುದನ್ನು ನೋಡುವುದಾದರೆ ಇದು ಹೆಬ್ಬಂಡೆಗಳ, ಗಿರಿ ಗುಹೆಗಳನ್ನು ಹೊಂದಿದ್ದು ಋಷಿ ಮುನಿಗಳು ತಪಸ್ಸಿಗೆ ಯೋಗ್ಯವಾಗಿತ್ತು ಎಂದು ಹೇಳಲಾಗಿದೆ.

ಬೆಟ್ಟದ ಮೇಲ್ಭಾಗದಲ್ಲಿ ಕುದುರೆ ಬೆನ್ನಿನ ಆಕಾರದ ಸ್ಥಳವಿದ್ದು, ಇದನ್ನು ವಿಭೂತಿ ತಿಟ್ಟು ಎಂದು ಕೂಡ ಕರೆಯಲಾಗುತ್ತಿದೆ. ಈ ಜಾಗವು ಹಿಂದೆ ಸಿದ್ದರಬೀಡಾಗಿತ್ತಂತೆ. ಇದರ ಕುರುಹುವಾಗಿ ಈಗಲೂ ಇಲ್ಲಿ ಸುಟ್ಟ ಇಟ್ಟಿಗೆ, ಹೆಂಚು ಚೂರು, ಮಣ್ಣು ಬೂದಿಗಳನ್ನು ಕಾಣಸಿಗುತ್ತವೆ. ಹಿಂದಿನ ಕಾಲದಲ್ಲಿ ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟದಿಂದ ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲೂಕಿನ ಕುಂದೂರು ಬೆಟ್ಟಕ್ಕೆ ಸುರಂಗ ಮಾರ್ಗವಿತ್ತೆಂದೂ ಸಿದ್ದರು ಈ ಸುರಂಗ ಮಾರ್ಗದಲ್ಲಿ ಸಂಚರಿಸುತ್ತಿದ್ದರು ಎಂದು ಹೇಳಲಾಗುತ್ತದೆ.

ಬೆಟ್ಟವನ್ನು ಏರುತ್ತಾ ಹೋದರೆ ಮಧ್ಯಭಾಗದಲ್ಲಿ ಗವಿಯಿದ್ದು ಅದಕ್ಕೆ ಮೇಗಳ ಗವಿ ಎಂಬ ಹೆಸರಿದೆ. ಬೃಹತ್ ಬಂಡೆಯಿಂದ ಸೃಷ್ಠಿಯಾಗಿರುವ ಗವಿಯು ಬಹುದೊಡ್ಡದಾಗಿದೆ. ಇಲ್ಲಿ ಹರಿಯುವ ನೀರನ್ನು ಸಿದ್ದಗಂಗೆ ಅಥವಾ ಅಂತರಗಂಗೆ ಎಂದು ಕರೆಯಲಾಗುತ್ತಿದೆ. ಬೆಟ್ಟದ ಮೇಲ್ಭಾಗವನ್ನು ತಲುಪಿ ಸುತ್ತಲೂ ಕಣ್ಣು ಹಾಯಿಸಿದರೆ ಕಾಣ ಸಿಗುವ ಸುಂದರ ನೋಟ ಮನತಣಿಸುತ್ತದೆ.

ಇಲ್ಲಿನ ಬೆಟ್ಟವು ಹಲವು ಐಹಿತ್ಯವನ್ನು ಹೊಂದಿದ್ದು ಇಲ್ಲಿರುವ ಮೇಗಳಗವಿಯಲ್ಲಿ ಗವಿಮಠದ ಶಿವಯೋಗಿಗಳು ಪೂಜಾ ಕೈಂಕರ್ಯಗಳನ್ನು ಮಾಡುತ್ತಾ ಧ್ಯಾನಾಸಕ್ತರಾದಾಗ ಅವರ ಸುತ್ತಲೂ ಕರಡಿ, ಹುಲಿಗಳಂತಹ ಪ್ರಾಣಿಗಳು ಸುತ್ತುವರಿದು ಕುಳಿತುಕೊಳ್ಳುತ್ತಿದ್ದವಂತೆ. ಇಲ್ಲೊಂದು ಹೆಬ್ಬಂಡೆಯಿದ್ದು ಅದಕ್ಕೆ ಓಕಳಿಕಲ್ಲು ಎಂಬ ಹೆಸರಿದೆ. ಈ ಹೆಬ್ಬಂಡೆಗೆ ಅಭಿಮುಖವಾಗಿ ಕುಳಿತು ಕೂಗಿದರೆ ಪ್ರತಿಧ್ವನಿ ಕೇಳಿ ಬರುತ್ತಿದ್ದು, ಇದಕ್ಕೆ ನಾದಾನುಸಂಧಾನ ಕಲ್ಲೆಂಬ ಮತ್ತೊಂದು ಹೆಸರಿದೆ.

ಬೆಟ್ಟದ ಒಂದು ಭಾಗದಲ್ಲಿ ಕೋಡುಗಲ್ಲು ಬಸಪ್ಪನ ಬಂಡೆಯಿದ್ದು, ಇದನ್ನು ಕೆಲವರು ಮಾರಮ್ಮನ ಕಲ್ಲು ಎಂಬ ಹೆಸರು ಕೂಡ ಇದೆ. ಮಳೆಗಾಲದಲ್ಲಿ ಮಳೆ ಸುರಿಯದೆ ಕ್ಷಾಮ ಕಾಣಿಕೊಂಡಾಗ ಊರಿನ ಹಿರಿಯರೆಲ್ಲರು ಸೇರಿ ಮನೆ ಮನೆಗೆ ತೆರಳಿ ಪಡಿ ಎತ್ತಿ ಬಸಪ್ಪನಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ದೇವರಿಗೆ ನೈವೇದ್ಯ ಸಲ್ಲಿಸಿದರೆ ಮಳೆ ಸುರಿಯುತ್ತಿತ್ತು ಎಂದು ಹೇಳಲಾಗಿದೆ.

ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟದ ಸಮೀಪವೇ ಸೋಮೇಶ್ವರ ದೇವಾಲಯವಿದೆ. ಈ ದೇವಾಲಯ ಅಪರೂಪದ್ದಾಗಿದೆ. ಇದಲ್ಲದೆ ಈ ಊರಿನ ಸುತ್ತಮುತ್ತ ಸಿದ್ದೇಶ್ವರ ಸ್ವಾಮಿ, ಬೀರೇಶ್ವರ, ಚಿಕ್ಕಮ್ಮ, ದೊಡ್ಡಮ್ಮ ತಾಯಿಯ ದೇವಾಲಯ, ಗಣಪತಿ, ಸತ್ಯನಾರಾಯಣ ಸ್ವಾಮಿಯ ದೇವಾಲಯವೂ ಇದೆ. ಆದರೆ ಸಿದ್ದೇಶ್ವರ ಸ್ವಾಮಿಯೇ ಈ ಊರಿನ ಅಧಿದೇವತೆಯಾಗಿದ್ದು, ಈ ದೇವಾಲಯದ ಬಗ್ಗೆ ಅಪಾರ ಭಕ್ತಿ ಹಾಗೂ ನಂಬಿಕೆಯನ್ನು ಜನ ಹೊಂದಿದ್ದಾರೆ.

Advertisement
Tags :
LatestNewsNewsKannadaಒಡ್ಡುಗಲ್ಲು ರಂಗಸ್ವಾಮಿ ಬೆಟ್ಟಮೈಸೂರು
Advertisement
Next Article