For the best experience, open
https://m.newskannada.com
on your mobile browser.
Advertisement

'ಶ್ರೀ ಧರ್ಮಸ್ಥಳ ಕ್ಷೇತ್ರದಿಂದ ಒಳಿತಿನ ಸಾಧ್ಯತೆಗಳ ವಿಸ್ತರಣೆ'- ಡಾ. ಬಿ.ಎ ಕುಮಾರ ಹೆಗ್ಡೆ

ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀಕ್ಷೇತ್ರ ಧರ್ಮಸ್ಥಳವನ್ನು ಸಾಮಾಜಿಕ ಒಳಿತಿನ ಸಾಧ್ಯತೆಗಳ ವಿಸ್ತರಣೆಯ ಕೇಂದ್ರವನ್ನಾಗಿ ರೂಪಿಸಿದ್ದಾರೆ ಎಂದು ಎಸ್.ಡಿ..ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ ಹೆಗ್ಡೆ ನುಡಿದರು.
06:51 AM Nov 26, 2023 IST | Gayathri SG
 ಶ್ರೀ ಧರ್ಮಸ್ಥಳ ಕ್ಷೇತ್ರದಿಂದ ಒಳಿತಿನ ಸಾಧ್ಯತೆಗಳ ವಿಸ್ತರಣೆ   ಡಾ  ಬಿ ಎ ಕುಮಾರ ಹೆಗ್ಡೆ

ಉಜಿರೆ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀಕ್ಷೇತ್ರ ಧರ್ಮಸ್ಥಳವನ್ನು ಸಾಮಾಜಿಕ ಒಳಿತಿನ ಸಾಧ್ಯತೆಗಳ ವಿಸ್ತರಣೆಯ ಕೇಂದ್ರವನ್ನಾಗಿ ರೂಪಿಸಿದ್ದಾರೆ ಎಂದು ಎಸ್.ಡಿ..ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ ಹೆಗ್ಡೆ ನುಡಿದರು.

Advertisement

ಎಸ್.ಡಿ.ಎಂ ಪದವಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ(ನ. 25) ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 76ನೇ ಜನ್ಮ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಗಳಾದ ನಂತರ ನೆಡದಿದ್ದೆಲ್ಲವೂ ಇತಿಹಾಸ. ಶ್ರೀಕ್ಷೇತ್ರವನ್ನು ಸಾಮಾಜಿಕ ಒಳಿತಿನ ಕಾರ್ಯಗಳ ಮೂಲಕ ಜನಜನಿತವಾಗಿಸಿದರು. ನಮ್ಮ ಪರಂಪರೆಯ ಮೌಲಿಕ ಅಂಶಗಳ ಆಧಾರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತಂದರು. ಇದು ಅವರ ಶ್ರೇಷ್ಠತೆಗೆ ನಿದರ್ಶನ ಎಂದರು.

ಶಿಸ್ತು, ಸಂಯಮ, ಸ್ಥಿತ ಪ್ರಜ್ಞತೆ, ಗಂಭೀರ ನಾಯಕತ್ವದ ಗುಣ, ಬಡವರ ಕುರಿತ ಕಾಳಜಿ ಸೇರಿದಂತೆ ಹಲವು ಗುಣಗಳ ಮೂಲಕ ವೀರೇಂದ್ರ ಹೆಗ್ಗಡೆ ಅವರು ಮಾದರಿ ವ್ಯಕ್ತಿತ್ವವಾಗಿ ರೂಪುಗೊಂಡರು. ಮದ್ಯ ವರ್ಜನ ಶಿಬಿರದ ಮೂಲಕ ರಾಷ್ಟçಮಟ್ಟದಲ್ಲಿ ಕ್ರಾಂತಿ ಉಂಟುಮಾಡಿದ್ದಾರೆ. ನಿತ್ಯ ಸಾವಿರಾರು ಯಾತ್ರಿಗಳಿಗೆ ಅನ್ನಪೂರ್ಣ ಛತ್ರದ ಮೂಲಕ ಅನ್ನ ದಾಸೋಹ ಮಾಡುತ್ತಿದ್ದಾರೆ. ಇಂತಹ ಸಾಧಕರ ಜೀವನಗಾಥೆಯನ್ನು ಪ್ರತೀ ವಿದ್ಯಾರ್ಥಿಗಳೂ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಉತ್ಕೃಷ್ಠತೆಗೆ ಇನ್ನೊಂದು ಹೆಸರೇ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗುರತನ್ನು ಧರ್ಮಾಧಿಕಾರಿಗಳು ಸೃಷ್ಟಿ ಮಾಡಿದ್ದಾರೆ. ಹಿತ- ಮಿತ ಶುಲ್ಕದ ಜೊತೆ ಶ್ರೇಷ್ಠ ಶಿಕ್ಷಣವನ್ನು ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳಿಗೆ ಧಾರೆಯೆರೆಯುತ್ತಿದ್ದಾರೆ ಎಂದು ತಿಳಿಸಿದರು.

ಪದವಿ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಎಸ್.ಎನ್ ಕಾಕತ್ಕರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಹೆಗ್ಗಡೆಯವರ ಜೀವನ ಸಾಧನೆಗಳನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುರಿತ ಕಿರು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾತ್ಮಕ ರಿಜಿಸ್ಟಾರ್ ಡಾ. ಶಲೀಪ್ ಎ.ಪಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಯೋಜಕ ನಟರಾಜ್ ಎಚ್. ಕೆ. ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಎಂ. ಪಿ ಶ್ರಿನಾಥ್ ವಂದಿಸಿದರು. ವಿದ್ಯಾರ್ಥಿನಿ ಹರ್ಷಿತಾ ಕೆ. ಆರ್. ಕಾರ್ಯಕ್ರಮ ನಿರ್ವಹಿಸಿದರು.

Advertisement
Tags :
Advertisement