For the best experience, open
https://m.newskannada.com
on your mobile browser.
Advertisement

ಶಿಸ್ತುಬದ್ಧ ಆಹಾರ ಕ್ರಮದಿಂದ ಸ‍್ಥೂಲಕಾಯಕ್ಕೆ ಗುಡ್‍ ಬೈ

ನಾವೆಲ್ಲರೂ ಈಗ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸುತ್ತಿದ್ದೇವೆ. ಅಷ್ಟೇ ಅಲ್ಲದೆ ದೇಹದಾರ್ಢ್ಯ ಬಗ್ಗೆಯೂ ಹೆಚ್ಚಿನ ಗಮನಹರಿಸುತ್ತಿದ್ದೇವೆ. ಹೀಗಾಗಿಯೇ ಸ್ವಲ್ಪ ತೂಕ ಹೆಚ್ಚಾದರೂ ಆತಂಕಗೊಳ್ಳುತ್ತೇವೆ. ತೂಕ ಕಡಿಮೆ ಮಾಡಿಕೊಳ್ಳಲು ನಾನಾ ರೀತಿಯ ಕಸರತ್ತು ಮಾಡುತ್ತೇವೆ. ಇದಕ್ಕೆಲ್ಲ ಕಾರಣಗಳು ನಾವು ದೈಹಿಕ ಶ್ರಮದ ಕೆಲಸಗಳನ್ನು ಮಾಡದಿರುವುದಾಗಿದೆ.
02:20 PM Jan 05, 2024 IST | Ashika S
ಶಿಸ್ತುಬದ್ಧ ಆಹಾರ ಕ್ರಮದಿಂದ ಸ‍್ಥೂಲಕಾಯಕ್ಕೆ ಗುಡ್‍ ಬೈ

ನಾವೆಲ್ಲರೂ ಈಗ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸುತ್ತಿದ್ದೇವೆ. ಅಷ್ಟೇ ಅಲ್ಲದೆ ದೇಹದಾರ್ಢ್ಯ ಬಗ್ಗೆಯೂ ಹೆಚ್ಚಿನ ಗಮನಹರಿಸುತ್ತಿದ್ದೇವೆ. ಹೀಗಾಗಿಯೇ ಸ್ವಲ್ಪ ತೂಕ ಹೆಚ್ಚಾದರೂ ಆತಂಕಗೊಳ್ಳುತ್ತೇವೆ. ತೂಕ ಕಡಿಮೆ ಮಾಡಿಕೊಳ್ಳಲು ನಾನಾ ರೀತಿಯ ಕಸರತ್ತು ಮಾಡುತ್ತೇವೆ. ಇದಕ್ಕೆಲ್ಲ ಕಾರಣಗಳು ನಾವು ದೈಹಿಕ ಶ್ರಮದ ಕೆಲಸಗಳನ್ನು ಮಾಡದಿರುವುದಾಗಿದೆ.

Advertisement

ಮನೆಯಿಂದ ಒಂದೇ ಒಂದು ಹೆಜ್ಜೆಯನ್ನು ಹೊರಗಿಡಬೇಕಾದರೂ ವಾಹನ ಬೇಕು, ಬೆಳಗ್ಗಿನಿಂದ ರಾತ್ರಿವರೆಗೆ ಕೆಲಸ ಮಾಡಿದರೂ ದೈಹಿಕ ಪರಿಶ್ರಮವಿಲ್ಲ, ನಡಿಗೆಯಂತು ಇಲ್ಲವೇ ಇಲ್ಲ. ಪ್ರತಿಯೊಬ್ಬರೂ ದೈಹಿಕ ಶ್ರಮವಿಲ್ಲದ ಕೆಲಸವನ್ನು ಆಯ್ಕೆ  ಮಾಡಿಕೊಳ್ಳುತ್ತಿದ್ದರೂ ಮಾನಸಿಕ ಒತ್ತಡವಂತು ಇದ್ದೇ ಇದೆ.  ಕೂತಲ್ಲೇ ಕುಳಿತು ಕೆಲಸ ಮಾಡುವುದು, ಟಿವಿ ನೋಡುವುದು, ಹೀಗೆ ದೈಹಿಕವಾಗಿ ಯಾವುದೇ ಚಟುವಟಿಕೆಯಿಲ್ಲದೆ ಹೋದರೆ ಸ‍್ಥೂಲಕಾಯವಾಗುವುದರೊಂದಿಗೆ ಅನಾರೋಗ್ಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇತ್ತೀಚೆಗಿನ ದಿನಗಳಲ್ಲಿ  ವಯಸ್ಸಿಗೆ, ಎತ್ತರಕ್ಕೆ ತಕ್ಕಂತೆ ನಮ್ಮ ದೇಹದ ತೂಕವನ್ನು ಕಾಪಾಡಿಕೊಳ್ಳುವತ್ತ ಜನ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಮಹಿಳೆಯರು ಪುರುಷರು ಎಲ್ಲರೂ  ಮುಂಜಾನೆ  ವ್ಯಾಯಾಮ, ವಾಕಿಂಗ್ ಹೀಗೆ ದೇಹವನ್ನು ದಂಡಿಸಲು ಮುಂದಾಗುತ್ತಿದ್ದಾರೆ. ಅವರು ದೈಹಿಕ ಚಟುವಟಿಕೆಯಿಂದ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ದೈಹಿಕವಾಗಿ ಚಟುವಟಿಕೆಗಳನ್ನು ಮಾಡದೆ ಬೇರೆ ಬೇರೆ ರೀತಿಯ ಕ್ರಮಗಳಿಗೆ ಮುಂದಾಗುತ್ತಿದ್ದಾರೆ. ಕೆಲವರು ಔಷಧಿಗಳ ಮೊರೆ ಹೋದರೆ ಮತ್ತೆ ಕೆಲವರು ಉಪವಾಸ ಮಾಡುತ್ತಾರೆ. ಆದರೆ ಔಷಧಿ ಮೂಲಕ ದೇಹದ ತೂಕವನ್ನು ಇಳಿಸುತ್ತೇನೆ ಎನ್ನುವುದು ಮೂರ್ಖತನವಾಗಿ ಬಿಡುತ್ತದೆ.

Advertisement

ಒಂದು ವೇಳೆ ಆಹಾರ ಕ್ರಮಗಳಿಂದ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕಾದರೆ ಆಹಾರ ಕ್ರಮಗಳಲ್ಲಿ ಶಿಸ್ತು ಬಹುಮುಖ್ಯವಾಗುತ್ತದೆ. ಜತೆಗೆ  ವೈದ್ಯರು ಹೇಳುವ ಸಲಹೆ ಮತ್ತು ಆಹಾರ ಕ್ರಮಗಳನ್ನು ನಿತ್ಯದ ಬದುಕಿನಲ್ಲಿ  ಅಳವಡಿಸಿಕೊಳ್ಳಲು ತಯಾರಿರಬೇಕಾಗುತ್ತದೆ. ವೈದ್ಯರು ಹೇಳುವ ಆಹಾರ ಕ್ರಮಗಳಂತೆ ಎಣ್ಣೆ, ಬೆಣ್ಣೆ, ಜಿಡ್ಡಿನ ಪದಾರ್ಥಗಳಷ್ಟೇ ಅಲ್ಲದೆ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ದೇಹದ ತೂಕವನ್ನು ಹೆಚ್ಚಿಸುವುದರಿಂದ ಅವುಗಳನ್ನು ದೂರವಿಡುವುದು ಅನಿವಾರ್ಯವಾಗಿದೆ.

ಮಧ್ಯೆ, ಮಧ್ಯೆ ಊಟ ಬಿಟ್ಟರೆ ಸಣ್ಣಗಾಗಬಹುದು ಎಂಬ ಭ್ರಮೆ ಕೆಲವರಲ್ಲಿದೆ. ಅದರಿಂದ ಪ್ರಯೋಜನವಿಲ್ಲ. ಕಾರಣ ಮತ್ತೊಂದು ಹೊತ್ತು ಹೆಚ್ಚು ಊಟ ಸೇವಿಸುವಂತಾಗುತ್ತದೆ. ಹಾಗಾಗಿ ಊಟವನ್ನು ತಪ್ಪಿಸದೆ ಪ್ರಮಾಣವನ್ನು ಕಡಿಮೆಗೊಳಿಸಬೇಕು. ಮಧ್ಯೆ ಮಧ್ಯೆ ಕುರುಕು ತಿಂಡಿಗಳನ್ನು ತಿನ್ನುವ ಅಭ್ಯಾಸ ಕಡಿಮೆ ಮಾಡಬೇಕು ಎನ್ನುವುದಕ್ಕಿಂತಲೂ ಬಿಟ್ಟು ಬಿಡುವುದು ಒಳ್ಳೆಯದು.

ಬೆಳಗ್ಗಿನ ಉಪಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ಅದನ್ನು ತಪ್ಪಿಸಬಾರದು. ರಾತ್ರಿ ವೇಳೆ ಊಟವಾದ ತಕ್ಷಣವೇ ಮಲಗುವುದು ಒಳ್ಳೆಯ ಅಭ್ಯಾಸವಲ್ಲ. ಒಂದಷ್ಟು ಹೊತ್ತು ಅಡ್ಡಾಡಿ ಬಳಿಕ ಮಲಗುವುದು ಒಳ್ಳೆಯದು. ಟಿವಿ ನೋಡುತ್ತಾ, ಪುಸ್ತಕ ಓದುತ್ತಾ ಊಟ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದರೆ ಅದನ್ನು ಬಿಟ್ಟುಬಿಡುವುದು ಒಳಿತು.  ನಿಧಾನವಾಗಿ ಚೆನ್ನಾಗಿ ಅಗಿದು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಗಬಗಬನೆ ತಿಂದು ಎದ್ದು ಹೋಗುವ ಅಭ್ಯಾಸವಿದ್ದರೆ ಅದಕ್ಕೆ ಕಡಿವಾಣ ಹಾಕಲೇ ಬೇಕಾಗುತ್ತದೆ.

ಕೊಬ್ಬಿನ ಅಂಶವನ್ನು ಸಂಪೂರ್ಣ ಕಡಿಮೆ ಮಾಡದೆ ಸಮತೋಲನೆ ಕಾಯ್ದುಕೊಳ್ಳಬೇಕು, ಸಕ್ಕರೆ ಪ್ರಮಾಣ ಕಡಿಮೆಯಿದ್ದಷ್ಟು  ಒಳಿತು. ಕೃತಕ, ಸಂಸ್ಕರಿಸಿದ, ಬೇಕರಿಯ ಪದಾರ್ಥಗಳು, ಐಸ್‌ಕ್ರೀಂ, ಫಿಜ್ಹಾ, ಬರ್ಗರ್‌ನಂತಹ ತಿನಿಸುಗಳಿಂದ ಆದಷ್ಟು ದೂರವಿರಬೇಕು. ಸೇವಿಸದಿದ್ದರೆ ಇನ್ನು ಒಳ್ಳೆಯದು.

ಕೊಬ್ಬರಿ, ಎಳ್ಳು, ಕಡ್ಲೆಕಾಯಿ, ಗೋಡಂಬಿ, ಬಾದಾಮಿ ಮೊದಲಾದ ಡ್ರೈಫ್ರೂಟ್ಸ್ ಸೇವನೆ ಕಡಿಮೆ ಮಾಡಬೇಕು. ತುಪ್ಪ, ಚೀಸ್,  ಪನ್ನೀರ್ ಸೇವಿಸದೆ ಕೆನೆ ತೆಗೆದಹಾಲು, ಕಡಿದ ಮಜ್ಜಿಗೆ ಸೇವಿಸಬೇಕು. ಕೊಬ್ಬಿನ ಅಂಶವಿರುವ ಮಾಂಸ ಸೇವನೆ ಕಡಿಮೆ ಮಾಡಿದಷ್ಟು ಉತ್ತಮ. ಉಪ್ಪಿನ ಅಂಶ ಹೆಚ್ಚಿರುವ ಉಪ್ಪಿನ ಕಾಯಿ, ಸಂಡಿಗೆ, ಹಪ್ಪಳ ಮೊದಲಾದವುಗಳನ್ನು ದೂರವಿಡಬೇಕು.

ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ವರ್ಜಿಸಿ ಹಬೆಯಲ್ಲಿ ಬೇಯಿಸಿದ ಪದಾರ್ಥಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಹಣ್ಣಿನ ಜ್ಯೂಸ್ ಬದಲು ಹಣ್ಣನ್ನೇ ಸೇವಿಸಬೇಕು. ದಿನಕ್ಕೆ ಎಂಟರಿಂದ ಹತ್ತು ಲೋಟ ನೀರು ಸೇವಿಸಲೇ ಬೇಕು. ಸೇವಿಸುವ  ಆಹಾರದ ಪ್ರಮಾಣ ಕಡಿಮೆ ಮಾಡಬೇಕಾದರೆ ಊಟಕ್ಕೆ ಮುಂಚಿತವಾಗಿ ಒಂದು ಲೋಟ ನೀರು ಕುಡಿದು ಮತ್ತೆ ಊಟ ಮಾಡುವುದು ಒಳ್ಳೆಯದು.

ಕೊಬ್ಬಿನ ಅಂಶ ಕಡಿಮೆ ಇರುವ, ನಾರಿನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದು, ಮೊಳಕೆ ಕಟ್ಟಿದ ಕಾಳುಗಳು, ಸೊಪ್ಪು ತರಕಾರಿಗಳು, ಹಣ್ಣುಗಳ ಸೇವನೆಗೆ ಅದ್ಯತೆ ನೀಡಬೇಕು. ದೇಹದ ತೂಕವನ್ನು ಒಮ್ಮೆಗೆ ಇಳಿಸಲು ಯಾವುದೇ ಔಷಧಿಯಿಲ್ಲ.  ಆದ್ದರಿಂದ ನಕಲಿ ಔಷಧಿಗಳಿಗೆ ಮೋಸ ಹೋಗುವುದಕ್ಕಿಂತ ವ್ಯಾಯಾಮ, ಕ್ರಮಬದ್ಧ ಆಹಾರ ಸೇವನೆ ಮೂಲಕ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದರ ಜತೆಗೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

Advertisement
Tags :
Advertisement