For the best experience, open
https://m.newskannada.com
on your mobile browser.
Advertisement

ದ.ಕ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ : ಡಾ.ಎಚ್.ಆರ್.ತಿಮ್ಮಯ್ಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ 6 ಬೆಡ್, ಪ್ರತಿ ತಾಲೂಕಿನಲ್ಲಿ ಎರಡು ಬೆಡ್, ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಒಂದು ಬೆಡ್ ಗಳನ್ನು ಮೀಸಲಿಡಲಾಗಿದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಚ್ .ಆರ್ .ತಿಮ್ಮಯ್ಯ ತಿಳಿಸಿದ್ದಾರೆ.
06:44 PM May 06, 2024 IST | Maithri S
ದ ಕ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ   ಡಾ ಎಚ್ ಆರ್ ತಿಮ್ಮಯ್ಯ

ಮಂಗಳೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ 6 ಬೆಡ್, ಪ್ರತಿ ತಾಲೂಕಿನಲ್ಲಿ ಎರಡು ಬೆಡ್, ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಒಂದು ಬೆಡ್ ಗಳನ್ನು ಮೀಸಲಿಡಲಾಗಿದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಚ್ .ಆರ್ .ತಿಮ್ಮಯ್ಯ ತಿಳಿಸಿದ್ದಾರೆ.

Advertisement

ಅವರು ಶುಕ್ರವಾರ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಂಡ ಮಾಧ್ಯಮ ಸಂವಾದ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಶಕಗಳ ತಾಪಮಾನವನ್ನು ಗಮನಿಸಿದಾಗ 32 ಡಿಗ್ರಿ ಸೆಲ್ಸಿಯಸ್ ನಿಂದ 33ಡಿ ಸೆ.ದಾಖಲಾಗುತ್ತಿತ್ತು. ಈ ಬಾರಿ ತಾಪಮಾನ 36ರಿಂದ 40 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ. ಈ ರೀತಿ ತಾಪಮಾನದಿಂದ ಬಿಸಿಲಿನಲ್ಲಿ ಹೆಚ್ಚು ಓಡಾಡುತ್ತಿರುವವರಿಗೆ ತಲೆ ನೋವು, ಸುಸ್ತು, ನಿಶ್ಯಕ್ತಿ, ಚರ್ಮ ತುರಿಕೆ, ಜ್ವರ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಕೆಲವೊಮ್ಮೆ ಬಿಸಿಲಿನಾಘಾತ ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಕಷ್ಟು ಮುಂಜಾಗ್ರತೆಯ
ಕ್ರಮ ಕೈಗೊಳ್ಳುವ ಅಗತ್ಯ ವಿದೆ ಎಂದು ಡಾ.ತಿಮ್ಮಯ್ಯ ತಿಳಿಸಿದ್ದಾರೆ. ಬಿಸಿಲಿನ ಝಳ ಹೆಚ್ಚಿರುವ ಸಂದರ್ಭದಲ್ಲಿ ಹೊರಗೆ ಓಡಾಡದೆ ಇರುವುದು ಸೂಕ್ತ. ಶುದ್ಧ ನೀರಿನ ಸೇವನೆ, ಮಜ್ಜಿಗೆ ಸೇವನೆ, ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಧರಿಸುವುದು, ಬಿಸಿಲಿನ ನೇರಾಘಾತ ತಡೆಯಲು ಚಪ್ಪಲಿ ಧರಿಸುವುದು, ಕೊಡೆ ಬಳಸುವುದು ಉತ್ತಮ. ದೇಹ ನಿರ್ಜಲೀಕರಣವಾಗದಂತೆ ಎಚ್ಚರ ವಹಿಸಬೇಕು ಎಂದು ಡಾ.ತಿಮ್ಮಯ್ಯ ಸಲಹೆ ನೀಡಿದರು.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ. ಮರಗಳ ನಾಶ ,ವಾಹನಗಳ ದಟ್ಟಣೆ, ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾಪಮಾನದ ಏರಿಕೆಯಾಗುತ್ತಿದೆ ಎಂದು ಜಿಲ್ಲಾ ರೋಗ ವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾಪಮಾನ ಹೆಚ್ಚುತ್ತಿರುವ ಸಂದರ್ಭದಲ್ಲಿ ಸೊಳ್ಳೆಗಳು ಹೆಚ್ಚುತ್ತಿರುವ ಕಾರಣ ಡೆಂಗ್ಯೂ ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ಇದುವರೆಗೆ 108 ಡೆಂಗ್ಯೂ ಪ್ರಕರಣಗಳು ಕಂಡು ಬಂದಿವೆ. ಹೊರ ಜಿಲ್ಲೆಯ ಪ್ರಯಾಣಿಕರು ಜಿಲ್ಲೆಗೆ ಭೇಟಿ ನೀಡುತ್ತಿರುವ ಕಾರಣ ಡೆಂಗ್ಯೂ ಪೀಡಿತರ ಸಂಪರ್ಕದಿಂದಲೂ ಅಲ್ಪ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ನವೀನ್ ಚಂದ್ರ ಕುಲಾಲ್ ತಿಳಿಸಿದ್ದಾರೆ.

ನಾವು ಸೇವಿಸುವ ಮಸಾಲೆಯುಕ್ತ ಆಹಾರ ಪದಾರ್ಥಗಳು ಬೇಸಗೆಯಲ್ಲಿ ಸೂಕ್ತವಲ್ಲ ಎಂದು ಡಾ.ನವೀನ್ ಕುಲಾಲ್ ಸಲಹೆ ನೀಡಿದರು. ಸಂವಾದ ಗೋಷ್ಠಿಯಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರ ಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
Advertisement