For the best experience, open
https://m.newskannada.com
on your mobile browser.
Advertisement

ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಜೀವಕ್ಕೆ ಗಂಡಾಂತರ

ಇಂದಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹೀಗೆ ರಕ್ತದೊತ್ತಡ ಸಮಸ್ಯೆ ಕಾಡುವುದಕ್ಕೆ ಕಾರಣಗಳು ಹಲವು. ಅದರಲ್ಲಿಯೂ ಮುಖ್ಯವಾಗಿ ನಮ್ಮ ಜೀವನ ಶೈಲಿ, ಆಹಾರ ಕ್ರಮ, ದೈಹಿಕ ಚಟುವಟಿಕೆಗಳು ಹೀಗೆ ಮುಂತಾದ ಕಾರಣಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
02:56 PM May 19, 2024 IST | Ashika S
ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಜೀವಕ್ಕೆ ಗಂಡಾಂತರ

ಇಂದಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹೀಗೆ ರಕ್ತದೊತ್ತಡ ಸಮಸ್ಯೆ ಕಾಡುವುದಕ್ಕೆ ಕಾರಣಗಳು ಹಲವು. ಅದರಲ್ಲಿಯೂ ಮುಖ್ಯವಾಗಿ ನಮ್ಮ ಜೀವನ ಶೈಲಿ, ಆಹಾರ ಕ್ರಮ, ದೈಹಿಕ ಚಟುವಟಿಕೆಗಳು ಹೀಗೆ ಮುಂತಾದ ಕಾರಣಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

Advertisement

ಗರ್ಭಿಣಿಯರಲ್ಲಿ ರಕ್ತದೊತ್ತಡ ಸಮಸ್ಯೆ ಕಂಡುಬಂದರೆ ಹೆಚ್ಚಿನ ಅಪಾಯಗಳು ಉಂಟಾಗುತ್ತವೆ. ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಇಂಟರ್ನಲ್‌ ಮೆಡಿಸಿನ್‌ ತಜ್ಞ ಡಾ. ಚೇತನ್ ಟಿ ಎಲ್.

ಗರ್ಭಾವಸ್ಥೆಯಲ್ಲಿ 4 ವಿಧವಾದ ಅಧಿಕ ರಕ್ತದೊತ್ತಡಗಳಿರುತ್ತವೆ. ದೀರ್ಘಕಾಲದ ಅಧಿಕ ರದ್ತದೊತ್ತಡ, ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ, ಪ್ರಿಕ್ಲಾಂಪ್ಸಿಯಾ ಮತ್ತು ಎಕ್ಲಾಂಪ್ಸಿಯಾ. ದೀರ್ಘಕಾಲದ ಅಧಿಕ ರಕ್ತದೊತ್ತಡವು ಗರ್ಭಾವಸ್ಥೆಯ ಮೊದಲು ಅಂದರೆ ಗರ್ಭಧಾರಣೆಯ 20 ವಾರಗಳ ಒಳಗೆ ಕಂಡು ಬರುತ್ತದೆ. ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡವು 20 ವಾರಗಳ ನಂತರ ಕಂಡು ಬರುತ್ತದೆ. ಇದರಿಂದ ಯಾವುದೇ ಅಗಾಂಗಕ್ಕೆ ಹಾನಿಯಾಗುವುದಿಲ್ಲ ಜೊತೆಗೆ ಮೂತ್ರದಲ್ಲಿಯೂ ಪ್ರೋಟೀನ್‌ ನಷ್ಟವಾಗುವುದಿಲ್ಲ. ಪ್ರಿಕ್ಲಾಂಪ್ಸಿಯಾವು 20 ವಾರಗಳ ಗರ್ಭಾವಸ್ಥೆಯ ನಂತರ ಕಂಡು ಬರುವ ಅಧಿಕ ರಕ್ತದೊತ್ತಡವಾಗಿದ್ದು, ಇದರಿಂದ ಅಂಗಾಂಗಳಿಗೆ ಹಾನಿಯಾಗುವುದರ ಜೊತೆಗೆ ಮೂತ್ರದ ಮೂಲಕ ಪ್ರೋಟಿನ್‌ ಅಂಶ ಹೊರಹೋಗುತ್ತದೆ. ಎಕ್ಲಾಂಪ್ಸಿಯಾ ಅಂದರೆ ಅಧಿಕ ರಕ್ತದೊತ್ತಡದಿಂದ ಗಂಭೀರ ಸ್ಥಿತಿಗೆ ತಲುಪುವ ಸಂಭವವಿರುತ್ತದೆ.

Advertisement

ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡದಿಂದ ತಾಯಿ ಮತ್ತು ಮಗುವಿಗೆ ಹಲವು ತೊಂದರೆಗಳಾಗುತ್ತವೆ. ಗರ್ಭಾಪಾತ, ಅಕಾಲಿಕ ಹೆರಿಗೆ, ಮೂತ್ರಪಿಂಡದ ಸಮಸ್ಯೆ ಜೊತೆಗೆ ಪಾರ್ಶ್ವವಾಯು ಕೂಡಾ ಕಾಡಬಹುದು. ಅವಧಿಗೆ ಮುನ್ನ ಜನಿಸಿದ ಹಾಗೂ ಕಡಿಮೆ ಜನನ ತೂಕ ಮತ್ತು ಪ್ರಸವಪೂರ್ವ ಹೈಪೋಕ್ಸಿಯಾದಿಂದ ಮಗುವಿಗೆ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಪಡೆದುಕೊಳ್ಳಲು ಕಷ್ಟವಾಗುತ್ತದೆ.

ಯಾರಿಗೆ ಹೆಚ್ಚು ಸಮಸ್ಯೆ?
ಮೊದಲ ಬಾರಿ ಗರ್ಭಧರಿಸಿರುವವರಿಗೆ,ಈ ಮೊದಲು ಗರ್ಭಿಣಿಯಾದಾಗ ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿದ್ದರೆ, ದೀರ್ಘಕಾಲದ ಅಧಿಕ ರಕ್ತದೊತ್ತಡ ಅಥವಾ ಮೂತ್ರಪಿಂಡ ಸಮಸ್ಯೆ, ಗರ್ಭದಲ್ಲಿ ಅವಳಿ ಮಕ್ಕಳನ್ನು ಹೊಂದಿದ್ದಲ್ಲಿ, ಅನುವಂಶೀಯವಾಗಿ ಅಧಿಕ ರಕ್ತದೊತ್ತಡ ಸಮಸ್ಯೆಯಿದ್ದಲ್ಲಿ, ಸ್ಥೂಲಕಾಯ, ಮಧುಮೇಹಿಗಳಿಗೆ ಮತ್ತು 40 ವರ್ಷ ವಯೋಮಿತಿಯ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.

ಗರ್ಭಾವಸ್ಥೆಯಲ್ಲಿ ಕಂಡುಬರುವ ಅಧಿಕ ರಕ್ತದೊತ್ತಡದ ಲಕ್ಷಣಗಳೇನು?
ತಲೆನೋವು, ದೃಷ್ಟಿ ಮಂದವಾಗುವುದು, ವಾಕರಿಕೆ ಮತ್ತು ವಾಂತಿ, ಮುಖ ಮತ್ತು ಕೈಗಳ ಊತ, ಹಠಾತ್ ತೂಕ ಹೆಚ್ಚಾಗುವುದು ಮತ್ತು ಉಸಿರಾಟದ ತೊಂದರೆಗಳು ಕಂಡುಬರುತ್ತವೆ. ಹೀಗಾಗಿ ಮಹಿಳೆಯರು ಗರ್ಭದಾರಣೆಗು ಮುನ್ನ ಸೂಕ್ತ ಯೋಜನೆಯನ್ನು ಹಾಕಿಕೊಳ್ಳಬೇಕು. ಗರ್ಭಾವಸ್ಥೆಗೂ ಮುನ್ನ ರಕ್ತದೊತ್ತಡ ಸಮಸ್ಯೆಯನ್ನು ಹೇಗೆ ನಿಯಂತ್ರಿಸಬೇಕು, ಅರೋಗ್ಯಕರ ತೂಕ ಹೊಂದುವುದು, ಆರೋಗ್ಯಕರ ಆಹಾರ ಪದ್ಧತಿ, ರಕ್ತದೊತ್ತಡವನ್ನು ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞ ಚೇತನ್‌ ಟಿ.ಎಲ್.‌ ಸಲಹೆ ನೀಡಿದ್ದಾರೆ.

ಉದ್ಯೋಗದಲ್ಲಿ ತೊಡಗಿಕೊಂಡಿರುವ ಮಹಿಳೆಯರು ಉತ್ತಮ ಜೀವನಶೈಲಿಯನ್ನು ಹೊಂದುವ ಮೂಲಕ ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಬಹುದು. ಆದರೆ ಕೆಲವೊಮ್ಮೆ ಕೆಲಸದ ಒತ್ತಡವು ರಕ್ತದೊತ್ತಡ ಸಮಸ್ಯೆಗೆ ಕಾರಣವಾಗಬಹುದು. ಅತಿಯಾದ ಬೊಜ್ಜು ಹೊಂದಿರುವ ಹಾಗೂ ಸಕ್ರಿಯ ಜೀವನಶೈಲಿ ಹೊಂದಿರದ ಮಹಿಳೆಯರು ಗರ್ಭಾವಸ್ಥೆಯಲ್ಲಿ ತಮ್ಮ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಕಷ್ಟಪಡುತ್ತಾರೆ. ಹೀಗಾಗಿ ಸಕ್ರಿಯ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳನ್ನು ಹೊಂದಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಈ ಅಭ್ಯಾಸಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು, ಏಕೆಂದರೆ ಅವು ರಕ್ತದೊತ್ತಡವನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ಮಗುವಿನ ಮತ್ತು ಗರ್ಭಿಣಿ ಮಹಿಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ವೃತ್ತಿ ಜೀವನದಲ್ಲಿ ತೊಡಗಿಕೊಂಡಿರುವುದರ ಜೊತೆಗೆ ಹೆಚ್ಚಿನ ಒತ್ತಡವನ್ನು ಅನುಭವಿಸುವ ಮಹಿಳೆಯರು ಗರ್ಭಾವಸ್ತೆಯಲ್ಲಿ ರಕ್ತದೊತ್ತಡ ನಿಯಂತ್ರಣ ಮಾಡಲು ಹೆಚ್ಚು ಕಾಳಜಿವಹಿಸಬೇಕು. ಹಾಗಾದಾಗ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ ವೈದ್ಯ ಚೇತನ್.

Advertisement
Tags :
Advertisement