For the best experience, open
https://m.newskannada.com
on your mobile browser.
Advertisement

ಬೇಸಿಗೆಯಲ್ಲಿ ಮೈದುರ್ವಾಸನೆ ತಡೆಯುವುದು ಹೇಗೆ?

ಬೇಸಿಗೆ ದಿನಗಳಲ್ಲಿ ಬಿಸಲಿಗೆ ಮೈಬೆವರುವುದು ಸಹಜ. ಜತೆಗೆ ಈ ಬೆವರಿನಿಂದ ಮೈ ದುರ್ವಾಸನೆ ಬರುವುದರಿಂದ ಮುಜುಗರವೂ ಆಗುತ್ತದೆ ಇದನ್ನು ತಡೆಯಬೇಕಾದರೆ ನಾವು ಮುಂಜಾಗ್ರತೆ ಕ್ರಮದ ಜತೆಗೆ ನಮ್ಮ ಲೈಫ್ ಸ್ಟೈಲ್ ನಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಬೇಸಿಗೆಯಲ್ಲಿ ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು?
02:54 PM Feb 05, 2024 IST | Ashika S
ಬೇಸಿಗೆಯಲ್ಲಿ ಮೈದುರ್ವಾಸನೆ ತಡೆಯುವುದು ಹೇಗೆ

ಬೇಸಿಗೆ ದಿನಗಳಲ್ಲಿ ಬಿಸಲಿಗೆ ಮೈಬೆವರುವುದು ಸಹಜ. ಜತೆಗೆ ಈ ಬೆವರಿನಿಂದ ಮೈ ದುರ್ವಾಸನೆ ಬರುವುದರಿಂದ ಮುಜುಗರವೂ ಆಗುತ್ತದೆ ಇದನ್ನು ತಡೆಯಬೇಕಾದರೆ ನಾವು ಮುಂಜಾಗ್ರತೆ ಕ್ರಮದ ಜತೆಗೆ ನಮ್ಮ ಲೈಫ್ ಸ್ಟೈಲ್ ನಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಬೇಸಿಗೆಯಲ್ಲಿ ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು?

Advertisement

ಬೇಸಿಗೆಯಲ್ಲಿ ನಾವು  ಎಷ್ಟೇ  ನೀಟಾಗಿ ಡ್ರೆಸ್ ಮಾಡಿಕೊಂಡು ಆಕರ್ಷಕವಾಗಿ ಕಾಣುತ್ತಿದ್ದರೂ ಕೆಲವೊಮ್ಮೆ ನಮ್ಮ ಶರೀರದಿಂದ ಹೊರಬರುವ ವಾಸನೆ ಬೇರೆಯವರಿಗೆ ಅಸಹ್ಯ ಮೂಡಿಸಿಬಿಡುತ್ತದೆ. ಹೀಗಾಗಿ ನಮ್ಮಿಂದ ದೂರ ಸರಿಯಲು ಯತ್ನಿಸಿದರೂ ಅಚ್ಚರಿಯಿಲ್ಲ.  ಇನ್ನು ನಾವು ಮುಖದ ಕಾಳಜಿ ವಹಿಸಿ ಒಂದಷ್ಟು ಕ್ರೀಮ್, ಪೌಡರ್ ಬಳಸಿ ಸುಂದರವಾಗಿ ಕಾಣುವಂತೆ ನೋಡಿಕೊಂಡರೂ ಶರೀರದ ಇತರ ಅಂಗಗಳತ್ತ ಗಮನಹರಿಸದೆ ಹೋದರೆ ಕೆಲವೊಮ್ಮೆ ಮುಜುಗರ ಅನುಭವಿಸಬೇಕಾಗುತ್ತದೆ.

ನಾವು ನಮ್ಮ ಬಗ್ಗೆ ಒಂದಷ್ಟು ಆಸಕ್ತಿ ಮತ್ತು ಕಾಳಜಿ ವಹಿಸಿ ಶರೀರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ಇದನ್ನು  ತಡೆಯಲು ಮುಂದಾಗಬೇಕು. ನಮ್ಮ ಸೌಂದರ್ಯ, ಆಕರ್ಷಣೆ ಎಲ್ಲವೂ ನಮ್ಮ ಶರೀರ ಬೀರುವ ದುರ್ಗಂಧದ ಮುಂದೆ ಗೌಣವಾಗಿ ಬಿಡುತ್ತದೆ. ಇದನ್ನು ತಡೆಯಬೇಕಾದರೆ ತಜ್ಞರು ನೀಡುವ ಒಂದಷ್ಟು ಸಲಹೆಗಳನ್ನು ಪಾಲಿಸಬೇಕು. ಬೀಡಿ, ಸಿಗರೇಟ್, ಗುಟ್ಕಾ, ನಶ್ಯ ಮುಂತಾದ ಅಭ್ಯಾಸ ಹೊಂದಿರುವವರು ಅದನ್ನು ಮೊದಲು ಬಿಡಬೇಕು. ತಾವು ಸೇದಿ ಬಂದ ಸಿಗರೇಟ್‌ನ ವಾಸನೆ ನೀವು ಎದುರು ನಿಂತು ಮಾತನಾಡುತ್ತಿರುವ ವ್ಯಕ್ತಿಗೆ ವಾಕರಿಕೆ ತರಬಹುದು.

Advertisement

ಬೇಸಿಗೆಯಲ್ಲಿ ಅತಿಯಾದ ಬೆವರು ಮುಜುಗರ ತರುತ್ತದೆ. ಮೂಗು, ಕಿವಿ, ಬಾಯಿ, ಚರ್ಮಗಳಿಗೆ ಸಂಬಂಧಿಸಿದಂತೆ  ಕಾಯಿಲೆಗಳಿದ್ದರೆ ವೈದ್ಯರಿಗೆ ತೋರಿಸಿ ಅವರು ನೀಡುವ ಸಲಹೆಗಳನ್ನು ಅನುಸರಿಸಬೇಕು. ಹೆಚ್ಚಿನ ಜನರಿಗೆ ಕಂಕುಳಿನಿಂದಲೇ ದುರ್ವಾಸನೆ ಬರುತ್ತದೆ. ಕಾರಣ ಕಂಕುಳಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆಯದಿರುವುದು. ಇದನ್ನು ಆಗಾಗ್ಗೆ ತೆಗೆದು ಸ್ವಚ್ಛಗೊಳಿಸುತ್ತಿರಬೇಕು.

ಪ್ರತಿದಿನ ಕನಿಷ್ಟ ಎರಡು ಲೀಟರ್‌ನಷ್ಟು ನೀರನ್ನು  ಕುಡಿಯಬೇಕು. ತಲೆ ಕೂದಲು ಕೂಡ ವಾಸನೆ ಬೀರುತ್ತದೆ.  ಆದ್ದರಿಂದ ಯುವಕರಾದರೆ ಚಿಕ್ಕದಾಗಿ ಕ್ಷೌರ ಮಾಡಿ ತಲೆಯಲ್ಲಿನ ಹೊಟ್ಟನ್ನು ನಿಯಂತ್ರಿಸಲು ಮುಂದಾಗಬೇಕು. ಸ್ನಾನ ಮಾಡುವಾಗ ಕಂಕುಳು, ಕಿವಿ, ಸೇರಿದಂತೆ ಇನ್ನಿತರ ಭಾಗಗಳನ್ನು ಚೆನ್ನಾಗಿ ಸೋಪು ಬಳಸಿ ತೊಳೆಯಬೇಕು. ವ್ಯಾಯಾಮ, ಮುಂಜಾನೆ ವಾಕಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು.

ಬಿಗಿಯಾದ ಉಡುಪುಗಳನ್ನು ಧರಿಸದೆ, ಶರೀರಕ್ಕೆ ಗಾಳಿಯಾಡುವ ಹಾಗೂ ಹತ್ತಿಬಟ್ಟೆಗೆ ಆದ್ಯತೆ ನೀಡಬೇಕು.  ಬೇರೆಯವರು ಬಳಸಿದ ಟವಲ್ ಬಳಸದೆ ಒಗೆದು ಒಣಗಿಸಿ ಬಳಸಬೇಕು. ಬೇರೆಯವರಿಗೆ ಅಸಹ್ಯ ಎನಿಸದ ಉತ್ತಮ ಸುವಾಸನೆ ಬೀರುವ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಳ್ಳಬೇಕು. ಅವು ಶರೀರಕ್ಕೆ ಒಗ್ಗುವಂತಿದ್ದರೆ ಮಾತ್ರ ಬಳಸಬೇಕು. ವೈದ್ಯರ ಸಲಹೆಯೂ ಅಗತ್ಯವಾಗಿರುತ್ತದೆ.

ಹಲ್ಲಿನ ಅಥವಾ ಒಸಡುಗಳ ತೊಂದರೆಯಿದ್ದರೆ ದಂತ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಯನ್ನು  ಮಾಡಿಸಿಕೊಳ್ಳುವುದು ಅಗತ್ಯ. ಹಲ್ಲಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು.  ಕೆಲವು ಚುಯಿಂಗಮ್ ಅಗೆಯುವುದರಿಂದ ಬಾಯಿಯಲ್ಲಿ ಜೊಳ್ಳುರಸದೊಂದಿಗೆ ದುರ್ವಾಸನೆ ಸಮಸ್ಯೆ ಕಡಿಮೆಯಾಗಲು ಸಾಧ್ಯವಾಗುತ್ತದೆ. ಬಾಯಿಯಲ್ಲಿ ಲವಂಗದ ಚೂರುಗಳನ್ನು ಚಪ್ಪರಿಸುವುದರಿಂದ ದುರ್ವಾಸನೆ ತಡೆಯಬಹುದು.

ಬಾಯಿಯೊಳಗೆ ಸಿಂಪಡಿಸುವ ಕೆಲವು ರಾಸಾಯನಿಕ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಅದನ್ನು ಕೂಡ  ಉಪಯೋಗಿಸಬಹುದು. ಆದರೆ ಉಪಯೋಗಿಸುವ ಮುನ್ನ ವೈದ್ಯರ ಸಲಹೆ ಅಗತ್ಯ. ಬಹಳಷ್ಟು ಜನರಿಗೆ ದೇಹದ ದುರ್ಗಂಧ ರೋಗವಲ್ಲ ಅದು ನಾವು ಶುಚಿತ್ವಕ್ಕೆ ಗಮನ ನೀಡದ್ದರಿಂದ ಬಂದಿರುವ ತೊಂದರೆ ಎಂಬುದರ ಅರಿವಿಲ್ಲ. ಮೊದಲಿಗೆ ನಮ್ಮ ಶರೀರದ ಬಗ್ಗೆ ಕಾಳಜಿ ವಹಿಸಿದ್ದೇ ಆದರೆ ಇದನ್ನು ಸುಲಭವಾಗಿ ತಡೆಯಲು ಸಾಧ್ಯವಾಗುತ್ತದೆ ಎನ್ನುವುದನ್ನು ಮರೆಯಬಾರದು.

Advertisement
Tags :
Advertisement