For the best experience, open
https://m.newskannada.com
on your mobile browser.
Advertisement

ಒಗ್ಗಟ್ಟಿನ ಮನೋಭಾವ ಬೆಳೆಸುವಲ್ಲಿ ಅಂತರ್ ತರಗತಿ ಫೆಸ್ಟ್’ಗಳು ಪೂರಕ: ಡಿ. ಹರ್ಷೇಂದ್ರ ಕುಮಾರ್

ಜ್ಞಾನವು ವಿದ್ಯಾರ್ಥಿಗಳ ಅತ್ಯಂತ ದೊಡ್ಡ ಸಂಪತ್ತು. ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಜ್ಞಾನದ ಜೊತೆಗೆ ವಿದ್ಯಾರ್ಥಿಗಳಲ್ಲಿ ಒಗ್ಗಟ್ಟಿನ ಮನೋಭಾವವೂ ಅತ್ಯಂತ ಮುಖ್ಯವಾದುದು. ಅಂತಹ ಗುಣಗಳನ್ನು ಬೆಳೆಸುವಲ್ಲಿ ಕಲರವದಂತಹ ಕಾರ್ಯಕ್ರಮಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
03:08 PM Apr 12, 2024 IST | Ashika S
ಒಗ್ಗಟ್ಟಿನ ಮನೋಭಾವ ಬೆಳೆಸುವಲ್ಲಿ ಅಂತರ್ ತರಗತಿ ಫೆಸ್ಟ್’ಗಳು ಪೂರಕ  ಡಿ  ಹರ್ಷೇಂದ್ರ ಕುಮಾರ್

ಉಜಿರೆ: ಜ್ಞಾನವು ವಿದ್ಯಾರ್ಥಿಗಳ ಅತ್ಯಂತ ದೊಡ್ಡ ಸಂಪತ್ತು. ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಜ್ಞಾನದ ಜೊತೆಗೆ ವಿದ್ಯಾರ್ಥಿಗಳಲ್ಲಿ ಒಗ್ಗಟ್ಟಿನ ಮನೋಭಾವವೂ ಅತ್ಯಂತ ಮುಖ್ಯವಾದುದು. ಅಂತಹ ಗುಣಗಳನ್ನು ಬೆಳೆಸುವಲ್ಲಿ ಕಲರವದಂತಹ ಕಾರ್ಯಕ್ರಮಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.

Advertisement

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಲಾ ವಿಭಾಗದ ವತಿಯಿಂದ ಇಂದು (ಎ. 12) ಆಯೋಜಿಸಲಾಗಿದ್ದ ಒಂದು ದಿನದ ಅಂತರ್ ಕಾಲೇಜು & ಅಂತರ್ ತರಗತಿ ಫೆಸ್ಟ್ ‘ಕಲರವ 2024’ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜು ವಯಸ್ಸಿನಲ್ಲಿ ಮಕ್ಕಳಲ್ಲಿ ಹುಡುಗಾಟಿಕೆ ಸಹಜ. ಆದರೆ ಅದರ ಜೊತೆ ಅವರಲ್ಲಿ ಜವಾಬ್ದಾರಿ, ಒಗ್ಗಟ್ಟು ಸೇರಿದಾಗ ಅವರು ಪರಿಪೂರ್ಣಗೊಳ್ಳುತ್ತಾರೆ ಮತ್ತು ಆ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಗಣನೀಯ. ಕಾಲೇಜಿನ ಕಲಾ ವಿಭಾಗದಲ್ಲಿ 30ಕ್ಕೂ ಹೆಚ್ಚಿನ ಕಾಂಬಿನೇಷನ್ ಗಳು ಇರುವಾಗ ಮಕ್ಕಳನ್ನು ಒಗ್ಗೂಡಿಸುವ ಸಲುವಾಗಿ ಕಲರವದಂತಹ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಬೇಕು ಎಂದು ಅವರು ಹೇಳಿದರು.

Advertisement

“ಡಾ. ಡಿ. ವೀರೇಂದ್ರ ಹೆಗ್ಗಡೆ, ಹರೇಕಳ ಹಾಜಬ್ಬನಂಥವರು ನಮ್ಮೆಲ್ಲರಿಗೂ ಮಾದರಿ. ನಾವು ಅವರ ಜೀವನ, ವ್ಯಕ್ತಿತ್ವವನ್ನು ಅನುಸರಿಸಿಕೊಂಡು ಹೋದಾಗ ಅವರ ಜೀವನದಿಂದ ನಾವು ಪ್ರಭಾವಿತರಾಗುವುದು ಬಹಳಷ್ಟಿದೆ” ಎಂದರು.

ಮುಖ್ಯ ಅತಿಥಿ, ಪದ್ಮಶ್ರೀ ಪುರಸ್ಕೃತ ಸಮಾಜಸೇವಕ ಹರೇಕಳ ಹಾಜಬ್ಬ ಮಾತನಾಡಿದರು. ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಿ, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

“ಬಡತನದ ಕಾರಣದಿಂದ ನಾನು ಶಿಕ್ಷಣದಿಂದ ವಂಚಿತನಾದಂತೆ ನನ್ನೂರಿನ ಮಕ್ಕಳೂ ಶಿಕ್ಷಣವಂಚಿತರಾಗಬಾರದು ಎಂಬ ಉದ್ದೇಶದಿಂದ ಹರೇಕಳದ ನ್ಯೂಪಡ್ಡು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕಟ್ಟಲಾಯಿತು. ಈ ಸಣ್ಣ ಕಾರ್ಯವನ್ನು ಗುರುತಿಸಿ 2020ರ ಪದ್ಮಶ್ರೀ ಪುರಸ್ಕಾರವನ್ನು ನೀಡಲಾಯಿತು. ಮುಂದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಂತಹ ಗಣ್ಯರ ಸಹಕಾರದಿಂದ ಇಂದು 1 ಎಕರೆ 33 ಸೆಂಟ್ಸ್ ಜಾಗದಲ್ಲಿ ಪಿಯು ಕಾಲೇಜು ನಿರ್ಮಾಣ ಕಾರ್ಯ ನಡೆಯುತ್ತಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸ್ಪರ್ಧಾತ್ಮಕ ಗುಣಗಳನ್ನು ಬೆಳೆಸುವುದು ಇಂತಹ ಕಾರ್ಯಕ್ರಮದ ಮುಖ್ಯ ಉದ್ದೇಶ” ಎಂದರು.

ಈ ಸಂದರ್ಭ ಹರೇಕಳ ಹಾಜಬ್ಬ ಅವರು ಶಾಲೆಗೆ ಬೇಕಾದ ಕ್ರೀಡಾ ಸಾಮಗ್ರಿಗಳ ಕಿಟ್ ನೀಡಿ ಗೌರವಿಸಲಾಯಿತು.

ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಶಶಿಶೇಖರ್ ಎನ್. ಕಾಕತ್ಕರ್, ಆಡಳಿತ ಕುಲಸಚಿವೆ ಡಾ. ಶಲೀಫ್ ಕುಮಾರಿ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹನ್ನೆರಡು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಸ್ವಾಗತಿಸಿದರು. ಕಲಾ ನಿಕಾಯದ ಡೀನ್ ಡಾ. ಶ್ರೀಧರ ಎನ್. ಭಟ್ಟ ಮತ್ತು ವಿದ್ಯಾರ್ಥಿನಿ ಸಿಂಚನ ಟಿ. ಅತಿಥಿಗಳನ್ನು ಪರಿಚಯಿಸಿದರು. ಕಲಾ ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ಪ್ರತೀಕ್ಷಾ ವಂದಿಸಿದರು. ವಿದ್ಯಾರ್ಥಿನಿ ಮಾನಸ ನಿರೂಪಿಸಿದರು.

Advertisement
Tags :
Advertisement