For the best experience, open
https://m.newskannada.com
on your mobile browser.
Advertisement

ಬಸ್‌ನಲ್ಲಿ ಮೊಬೈಲ್ ಕಳ್ಳತನ: ಆರು ಮಂದಿ ಆರೋಪಿಗಳ ಬಂಧನ

ಬಿಎಂಟಿಸಿ ಬಸ್ ಹತ್ತುವ ನೆಪದಲ್ಲಿ ಪ್ರಯಾಣಿಕರ ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶದ ‘ಗೋಕಾವರಂ ಗ್ಯಾಂಗ್‌’ನ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. 
06:47 PM Apr 13, 2024 IST | Chaitra Kulal
ಬಸ್‌ನಲ್ಲಿ ಮೊಬೈಲ್ ಕಳ್ಳತನ  ಆರು ಮಂದಿ ಆರೋಪಿಗಳ ಬಂಧನ

ಬೆಂಗಳೂರು: ಬಿಎಂಟಿಸಿ ಬಸ್ ಹತ್ತುವ ನೆಪದಲ್ಲಿ ಪ್ರಯಾಣಿಕರ ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶದ ‘ಗೋಕಾವರಂ ಗ್ಯಾಂಗ್‌’ನ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

Advertisement

ಸಾಯಿಕುಮಾರ್‌, ಪೆದ್ದರಾಜು, ವೆಂಕಟೇಶ್, ರಮೇಶ್‌, ರವಿತೇಜ, ಬಾಲರಾಜು ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಬಂಧಿತರಿಂದ ₹30 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 107 ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಏಪ್ರಿಲ್‌ 4ರಂದು ವ್ಯಕ್ತಿಯೊಬ್ಬರು, ಬಿಎಂಟಿಸಿ ಬಸ್‌ ಹತ್ತುವಾಗ ಇದೇ ಗ್ಯಾಂಗ್‌ನ ಆರೋಪಿಗಳು ಮೊಬೈಲ್‌ ಕಳವು ಮಾಡಿದ್ದರು. ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಮೊದಲ ಬಾರಿಗೆ ಈ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement

ಬಸ್ ಬಂದ ಕೂಡಲೇ ಐವರು ಆರೋಪಿಗಳು, ಬಸ್ ಏರುವಂತೆ ನಟಿಸಿ ಜನಸಂದಣಿ ಸೃಷ್ಟಿಸುತ್ತಿದ್ದರು. ಅದರಲ್ಲಿ ಒಬ್ಬ ಆರೋಪಿ ಮೊಬೈಲ್‌ ಕದಿಯುತ್ತಿದ್ದ. ಮೊಬೈಲ್‌ ಕಳ್ಳತನ ಮಾಡಿದ ಆರೋಪಿ, ಅಲ್ಲೇ ಇಳಿದು ಹೋಗುತ್ತಿದ್ದನು. ಉಳಿದವರು ಮುಂದಿನ ನಿಲ್ದಾಣಗಳಲ್ಲಿ ಇಳಿಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಆಂಧ್ರಪ್ರದೇಶದಿಂದ ಬಂದಿದ್ದ ಆರೋಪಿಗಳು ಕಾಡುಗೋಡಿ ಹಾಗೂ ಆವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆಗೆ ಕೊಠಡಿ ಪಡೆದುಕೊಂಡಿದ್ದರು. ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಅಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಚಿನ್ನಸಂದ್ರದ ಕೊಠಡಿಯಲ್ಲಿ 80 ಮೊಬೈಲ್‌ಗಳು ಹಾಗೂ ಆವಲಹಳ್ಳಿಯ ಕೊಠಡಿಯಲ್ಲಿ 24 ಮೊಬೈಲ್‌ಗಳು ಸಿಕ್ಕಿವೆ. ಕದ್ದ ಮೊಬೈಲ್‌ಗಳನ್ನು ಒಂದು ಕೊಠಡಿಯಲ್ಲಿ ಸಂಗ್ರಹಿಸಿಡುತ್ತಿದ್ದರು. ನಂತರ ಅವುಗಳನ್ನು ಅಂತರ ರಾಜ್ಯ ಬಸ್‌ಗಳ ಮೂಲಕ ಹೊರರಾಜ್ಯಕ್ಕೆ ಕೊಂಡೊಯ್ದು ಅಲ್ಲಿ ಕಡಿಮೆ ಬೆಲೆಗೆ ಮಾರುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement
Tags :
Advertisement