For the best experience, open
https://m.newskannada.com
on your mobile browser.
Advertisement

ಅಂಬಿಕಾ ಅಂಗಳದಲ್ಲಿ ಸೂರ್ಯಗಾಯತ್ರಿ ತಂಡದಿಂದ ಸಂಗೀತ ವೈಭವ

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಯುವಗಾಯಕಿ ಸೂರ್ಯಗಾಯತ್ರಿ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ – ದಶಾಂಬಿಕೋತ್ಸವ ಪ್ರಯುಕ್ತ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಸಂಗೀತಾಸಕ್ತರು ಭಾಗಿಯಾಗಿ ರಸಾನುಭೂತಿಯನ್ನು ಆಸ್ವಾದಿಸಿದರು.
11:51 AM Jan 21, 2024 IST | Gayathri SG
ಅಂಬಿಕಾ ಅಂಗಳದಲ್ಲಿ ಸೂರ್ಯಗಾಯತ್ರಿ ತಂಡದಿಂದ ಸಂಗೀತ ವೈಭವ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಯುವಗಾಯಕಿ ಸೂರ್ಯಗಾಯತ್ರಿ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ – ದಶಾಂಬಿಕೋತ್ಸವ ಪ್ರಯುಕ್ತ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಸಂಗೀತಾಸಕ್ತರು ಭಾಗಿಯಾಗಿ ರಸಾನುಭೂತಿಯನ್ನು ಆಸ್ವಾದಿಸಿದರು.

Advertisement

ಪುತ್ತೂರಿಗೆ ಮೊಟ್ಟಮೊದಲ ಬಾರಿಗೆ ಆಗಮಿಸಿದ್ದ ಸೂರ್ಯಗಾಯತ್ರಿ ಅಂಬಿಕಾ ಸಂಸ್ಥೆಯಲ್ಲಿ ತನ್ನ ಹಾಡನ್ನು ಆರಂಭಿಸುವಾಗ ತನ್ನ ತಾಯಿ ರಚಿಸಿದ ಗಣಪತಿ ಸ್ತುತಿ ‘ಅಂಬಿಕಾ ಹೃದಯಾನಂದ ಮಾತೃಭಿ ಪರಿಪೂಜಿತಂ’ ಹಾಡಿನೊಂದಿಗೆ ಆರಂಭಿಸಿ ನೆರೆದವರ ಮನಸೂರೆಗೈದರು. ಸೂರ್ಯಗಾಯತ್ರಿಗೆ ಎಳೆಯ ವಯಸ್ಸಿನಲ್ಲಿಯೇ ಸಾಕಷ್ಟು ಖ್ಯಾತಿ ತಂದುಕೊಟ್ಟಿದ್ದ ಹನುಮಾನ್ ಚಾಲೀಸಾ ಹಾಡನ್ನು ಹಾಡಿ ಇಡಿಯ ಸಭೆ ತನ್ನೊಂದಿಗೆ ಹಾಡುವಂತೆ ಪ್ರೇರೇಪಿಸಿದರು. ‘ಜಯ ಹನುಮಾನ್ ಜ್ಞಾನಗುಣ ಸಾಗರ’ ಸಾಲುಗಳು ಸೂರ್ಯಗಾಯತ್ರಿ ಕಂಠದಿಂದ ಹೊರಹೊಮ್ಮುತ್ತಿದ್ದಂತೆ ಇಡಿಯ ಸಭೆ ಕರತಾಡನದ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂರ್ಯಗಾಯತ್ರಿಯವರ ‘ರಾಮಚಂದ್ರ ಕೃಪಾಳು’ ಹಾಡಿನ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು. ಆ ಹಾಡನ್ನು ಅಂಬಿಕಾದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಮೆರುಗನ್ನಿತ್ತರು. ಅಂತೆಯೇ ಜಗದೋದ್ಧಾರನ ಆಡಿಸಿದಳು ಯಶೋದೆ, ನೀಲಮೇಘ ಸುಂದರ ನಾರಾಯಣ ಗೋವಿಂದ, ಇವನೇ ರಾಮದಾಸ ಮೊದಲಾದ ಹಾಡುಗಳು ಅಪಾರ ಜನಮನ್ನಣೆಗೆ ಪಾತ್ರವಾದವು. ಈ ಮಧ್ಯೆ ಜಾನಪದ ಗೀತೆ ‘ಸೋಜುಗಾರ ಸೂಜಿಮಲ್ಲಿಗೆ ಮಾದೇವ ನಿನ್ನಾ’ ಹಾಡಂತೂ ಇಡಿಯ ಸಭಾಂಗಣವನ್ನು ಆವರಿಸಿ ಸರ್ವರ ಖುಷಿಗೆ ಕಾರಣವಾಯಿತು. ಕೊನೆಯಲ್ಲಿ ‘ಭಾಗ್ಯದಾ ಲಕ್ಷ್ಮೀ ಬಾರಮ್ಮಾ’ ಹಾಡನ್ನು ಹಾಡಿ ತಮ್ಮ ಎರಡೂವರೆ ಗಂಟೆಗಳ ನಿರಂತರ ಹಾಡಿಗೆ ಮುಕ್ತಾಯ ನೀಡಿದರು.

Advertisement

ರಾಮತಾರಕ ಜಪಮಹಾಯಜ್ಞದ ಸಮಾರೋಪ ಹಾಡು:
ಅಯೋಧ್ಯೆ ಶ್ರೀರಾಮಮಂದಿರ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ನವೆಂಬರ್ 2, 2023ರಿಂದ ತೊಡಗಿದಂತೆ ರಾಮತಾರಕ ಜಪಮಹಾಯಜ್ಞವನ್ನು ಆರಂಭಿಸಲಾಗಿತ್ತು. ಆ ಪ್ರಕಾರ ವಿದ್ಯಾರ್ಥಿಗಳೆಲ್ಲ ಸೇರಿ ಇದುವರೆಗೆ ಸುಮಾರು ಎಪ್ಪತ್ತೈದು ಲಕ್ಷದಷ್ಟು ರಾಮಜಪವನ್ನು ಜಪಿಸಿದ್ದರು. ಅದರ ಸಮಾರೋಪದ ಧ್ವನಿಯಾಗಿ ಸೂರ್ಯಗಾಯತ್ರಿಯವರು ‘ಶ್ರೀ ರಾಮ ಜಯರಾಮ ಜಯಜಯ ರಾಮ’ ಸ್ತುತಿಯನ್ನು ಕಾರ್ಯಕ್ರಮದ ಮಧ್ಯೆ ಹಾಡಿ ಜನಸಾಗರ ಭಕ್ತಿಭಾವದಲ್ಲಿ ತೇಲುವಂತೆ ಮಾಡಿದ್ದು ಎಲ್ಲರ ಅಭಿನಂದನೆಗೆ ಪಾತ್ರವಾಯಿತು.

ಕನ್ನಡ ಹಾಡುಗಳು:
ತನಗೆ ಕನ್ನಡ ಬರದಿದ್ದರೂ ಕನ್ನಡ ಹಾಡುಗಳನ್ನೇ ಹಾಡಿದ್ದು ಎಲ್ಲರಿಗೂ ಸಂತಸ ತಂದಿತು. ಎಲ್ಲೂ ತನಗೆ ಕನ್ನಡ ಬರುವುದಿಲ್ಲ ಎಂಬುದನ್ನು ತೋರ್ಪಡಿಸದೆ ಅಚ್ಚ ಕನ್ನಡತಿಯಂತೆ ಸೂರ್ಯಗಾಯತ್ರಿ ಹಾಡುಗಳನ್ನು ಪ್ರಸ್ತುತಪಡಿಸಿದರು. ಸೂರ್ಯಗಾಯತ್ರಿಯವರ ಜತೆ ವಯಲಿನ್‌ನಲ್ಲಿ ಗಣರಾಜ್ ಕಾರ್ಲೆ, ಮೃದಂಗದಲ್ಲಿ ಸೂರ್ಯಗಾಯತ್ರಿ ತಂದೆ ಪಿ.ವಿ.ಅನಿಲ್ ಕುಮಾರ್, ತಬಲದಲ್ಲಿ ಪ್ರಶಾಂತ್ ಶಂಕರ್ ಹಾಗೂ ರಿದಂಪ್ಯಾಡ್‌ನಲ್ಲಿ ಶೈಲೇಶ್ ಮರಾರ್ ಅತ್ಯುತ್ಕೃಷ್ಟ ರೀತಿಯಲ್ಲಿ ಸಹಕರಿಸಿದರು.

ಸನ್ಮಾನ:
ಎಳೆಯ ವಯಸ್ಸಿನಲ್ಲಿಯೇ ಅಪರಿಮಿತ ಸಾಧನೆಗೈದ ಸೂರ್ಯಗಾಯತ್ರಿಯವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಂಗೀತ ವಿದ್ವಾಂಸ ವಿದ್ವಾನ್ ಕಾಂಚನ ಈಶ್ವರ ಭಟ್ಟರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಅಂತೆಯೇ ಸೂರ್ಯಗಾಯತ್ರಿ ತಾಯಿ ಪಿ.ಕೆ.ದಿವ್ಯಾ ಅವರನ್ನು ಹಾಗೂ ಎಲ್ಲ ಸಹಕಲಾವಿದರನ್ನು ಗೌರವಿಸಲಾಯಿತು.

ಉದ್ಘಾಟನಾ ಕಾರ್ಯಕ್ರಮ: ಸೂರ್ಯಗಾಯತ್ರಿ ಅವರ ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ದಂಪತಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ನಟ್ಟೋಜ ಅವರು ಮಾತನಾಡಿ ಸಂಸ್ಕೃತಿ,. ಸಂಸ್ಕಾರಗಳ ಸಹಿತವಾದ ಶಿಕ್ಷಣಕ್ಕೆ ನಮ್ಮ ಆದ್ಯತೆ. ಸೂರ್ಯಗಾಯತ್ರಿಯವರು ಎಳೆಯ ವಯಸ್ಸಿನಲ್ಲಿಯೇ ಪ್ರಪಂಚದಾದ್ಯAತ ಭಾರತೀಯ ಸಂಗೀತ ಕಲೆಯನ್ನು ಪಸರಿಸುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಭಾರತೀಯತೆಯನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಸೂರ್ಯಗಾಯತ್ರಿಯವರಿಂದ ಪ್ರೇರಣೆ ಪಡೆದುಕೊಳ್ಳುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಆಡಳಿತ ಮಂಡಳಿ ಸದಸ್ಯರಾದ ಪುರಂದರ ಭಟ್, ಸುರೇಶ ಶೆಟ್ಟಿ, ಡಾ.ಎಚ್.ಮಾಧವ ಭಟ್, ಡಾ.ಎಂ.ಎಸ್.ಶೆಣೈ, ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ಬಿಂದು ಫ್ಯಾಕ್ಟರಿ ಮಾಲಕ ಸತ್ಯಶಂಕರ್, ಜಿ.ಎಲ್.ಆಚಾರ್ಯ ಜ್ಯುವೆಲ್ ಮಾಲಕ ಬಲರಾಮ ಆಚಾರ್ಯ, ನಗರಸಭಾ ಸದಸ್ಯ ಜಗನ್ನಿವಾಸ ರಾವ್, ವಿಶ್ರಾಂತ ಪ್ರಾಚಾರ್ಯ ವಿ.ಬಿ.ಅರ್ತಿಕಜೆ, ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಸತೀಶ್ ಇರ್ದೆ ಹಾಗೂ ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು. ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಮಹೇಶ್ ಕಜೆ ವಂದಿಸಿದರು. ಸೂರ್ಯಗಾಯತ್ರಿ ಅವರಿಂದ ಸುಂದರ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕಾಗಿ ದಶಾಂಬಿಕೋತ್ಸವ ಸಮಿತಿ ವತಿಯಿಂದ ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ಎಸ್ ನಟ್ಟೋಜ ದಂಪತಿಯನ್ನು ಗೌರವಿಸಲಾಯಿತು.

ಸೆಲ್ಫಿಗೆ ಮುಗಿಬಿದ್ದ ಜನ: ಸೂರ್ಯಗಾಯತ್ರಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅನೇಕ ಮಕ್ಕಳು, ವಿದ್ಯಾರ್ಥಿಗಳು, ಹಿರಿಯರು ಅವರೊಂದಿಗಿನ ಭಾವಚಿತ್ರಕ್ಕಾಗಿ ಮುಗಿಬಿದ್ದರು. ಪ್ರತಿಯೊಬ್ಬರೂ ಫೋಟೋ ತೆಗೆಸಿಕೊಂಡದ್ದಲ್ಲದೆ ಸೆಲ್ಫಿಯನ್ನೂ ಪಡೆದುಕೊಂಡರು. ಎಷ್ಟೇ ತಡವಾದರೂ ಪ್ರತಿಯೊಬ್ಬರ ಜತೆಗೂ ಫೋಟೋಕ್ಕಾಗಿ ನಿಂತ ಸೂರ್ಯಗಾಯತ್ರಿಯವರ ಸರಳ ನಡೆ ಶ್ಲಾಘನೆಗೆ ಪಾತ್ರವಾಯಿತು.

ಅಚ್ಚುಕಟ್ಟಾದ ವ್ಯವಸ್ಥೆ: ಸೂರ್ಯಗಾಯತ್ರಿ ಕಾರ್ಯಕ್ರಮಕ್ಕಾಗಿ ಅಂಬಿಕಾ ಕ್ಯಾಂಪಸ್ ನಲ್ಲಿ ಅತ್ಯಂತ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು. ಪಾರ್ಕಿಂಗ್ ವ್ಯವಸ್ಥೆ, ಆಸನದ ವ್ಯವಸ್ಥೆ, ಪಾನೀಯ ವ್ಯವಸ್ಥೆ, ಸೂಕ್ತ ಬೆಳಕು ಹಾಗೂ ಧ್ವನಿವರ್ಧಕದ ವ್ಯವಸ್ಥೆ, ಎಲ್‌ಇಡಿ ವ್ಯವಸ್ಥೆ ಕಾರ್ಯಕ್ರಮವನ್ನು ಹೆಚ್ಚು ಆಪ್ತವಾಗುವಂತೆ ಮಾಡಿತು. ಭಾಷಣಕ್ಕೆ ಆದ್ಯತೆ ಕೊಡದೆ ಸಂಗೀತ ಕಾರ್ಯಕ್ರಮಕ್ಕೆ ಬಹುತೇಕ ಎಲ್ಲ ಸಮಯವನ್ನೂ ಮೀಸಲಿರಿಸಿದ್ದು ಪ್ರೇಕ್ಷಕರ ಮನ್ನಣೆಗೆ ಪಾತ್ರವಾಯಿತು. ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಹಾಗೆಯೇ ಎಲ್ಲೂ ಬೊಬ್ಬೆ, ಕಿರುಚಾಟ ನಡೆಸದೆ ಕರತಾಡನದ ಮುಖಾಂತರವಷ್ಟೇ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸುತ್ತಿದ್ದ ಅಂಬಿಕಾ ವಿದ್ಯಾರ್ಥಿಗಳ ಶಿಸ್ತು ಕೂಡ ಗಮನ ಸೆಳೆಯಿತು.

Advertisement
Tags :
Advertisement