For the best experience, open
https://m.newskannada.com
on your mobile browser.
Advertisement

ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳರವರು ಶಕ್ತಿ ವಿದ್ಯಾಸಂಸ್ಥೆಗೆ ಭೇಟಿ

ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಗೆ ಭಾವೀ ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರು ದಿಗ್ವಿಜಯ ಯಾತ್ರೆಯ ನಿಮಿತ್ತ ಭೇಟಿ ನೀಡಿದರು. ಶ್ರೀಗಳನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ.ನಾಯ್ಕ್ ರವರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.
01:17 PM Jan 07, 2024 IST | Gayathri SG
ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳರವರು ಶಕ್ತಿ ವಿದ್ಯಾಸಂಸ್ಥೆಗೆ ಭೇಟಿ

ಮಂಗಳೂರು: ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಗೆ ಭಾವೀ ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರು ದಿಗ್ವಿಜಯ ಯಾತ್ರೆಯ ನಿಮಿತ್ತ ಭೇಟಿ ನೀಡಿದರು. ಶ್ರೀಗಳನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ.ನಾಯ್ಕ್ ರವರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ಪೂಜ್ಯರು ತಾಯಿ ಸರಸ್ವತಿಗೆ ವಂದಿಸಿ ನಂತರ ಐದನೇ ಮಹಡಿಯಲ್ಲಿರುವ ಶ್ರೀ ಕೃಷ್ಣನ ಪ್ರತಿಮೆಗೆ ಕೃಷ್ಣ ಅಷ್ಟೋತ್ತರ ಶತನಾಮದಿಂದ ತುಳಸಿ ಅರ್ಚನೆ ಮಾಡಿ ವಾದ್ಯಘೋಷದೊಂದಿಗೆ ವೇದಿಕೆಗೆ ಆಗಮಿಸಿದರು.

Advertisement

ನಂತರ ದೀಪಬೆಳಗಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ನಮ್ಮ ಸಂಪ್ರದಾಯದಂತೆ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ.ನಾಯ್ಕ್  ಫಲ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಗೋಪಾಲಕೃಷ್ಣ ದೇವಸ್ಥಾನವನ್ನು ೨೦೦೪ ರ ಶಿಲಾನ್ಯಾಸದಿಂದ ೨೦೨೪ ವರೆಗೆ ನಡೆದು ಬಂದ ದಾರಿಯನ್ನು ವಿವರಿಸಿದರು.

ಮುಂದುವರಿದು ಮಾತನಾಡಿದ ಅವರು ಡಾ. ಕೆ.ಸಿ.ನಾಯ್ಕ್ ರವರು ದೇವಸ್ಥಾನದ ದ್ವಾರವನ್ನು ವಿನೂತನವಾಗಿ ವಿನ್ಯಾಸಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಇದರ ಜೊತೆಗೆ ಅನ್ನಛತ್ರ ಮತ್ತು ಗೋಶಾಲೆಯನ್ನು ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ದೇವಸ್ಥಾನದ ಪ್ರೇರಣೆಯೊಂದಿಗೆ ೨೦೧೬ ರಿಂದ ಸಂಸ್ಕಾರಯುತ ಶಿಕ್ಷಣ ನೀಡುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಗೋಪಾಲಕೃಷ್ಣನ ಅನುಗ್ರಹದಿಂದ ಇಂದು ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ದಿವ್ಯಾಶೀರ್ವಚನ ನೀಡಿದ ಪರಮಪೂಜ್ಯ ಪುತ್ತಿಗೆ ಶ್ರೀಪಾದಂಗಳು ಶಕ್ತಿ ವಿದ್ಯಾಸಂಸ್ಥೆಯ ಶಿಸ್ತು ಹಾಗೂ ಸಂಸ್ಕಾರವನ್ನು ಕಂಡು ಹರ್ಷ ವ್ಯಕ್ತಪಡಿಸಿದರು. ನಾವು ಶ್ರಮಪಟ್ಟಾಗ ಅದಕ್ಕೆ ತಕ್ಕುದಾದ ಪ್ರತಿಫಲವನ್ನು ಭಗವಂತನು ಕೊಡುತ್ತಾನೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ ಮಹಾಭಾರತ ಯುದ್ಧದ ಸಂದರ್ಭದಲ್ಲಿ ದುರ್ಯೋದನ ಹಾಗೂ ಅರ್ಜುನ ಇಬ್ಬರೂ ಕೃಷ್ಣನಲ್ಲಿ ಸಹಾಯ ಕೇಳಲು ಹೋದಾಗ ನಿದ್ರೆಯಲ್ಲಿ ಇದ್ದ ಕೃಷ್ಣನ್ನು ನೋಡಿದ ದುರ್ಯೋದನ ತಲೆಯ ಸಮೀಪ ಕುಳಿತುಕೊಳ್ಳುತ್ತಾನೆ. ಅರ್ಜುನ ಕಾಲ ಬುಡದಲ್ಲಿ ಕುಳಿತುಕೊಳ್ಳುತ್ತಾನೆ. ಕೃಷ್ಣ ಎದ್ದಾಗ ಅರ್ಜುನನಲ್ಲಿ ಮೊದಲು ಮಾತನಾಡುತ್ತಾನೆ. ಶಸ್ತ್ರ ಹಿಡಿಯದ ಕೃಷ್ಣ ಬೇಕೋ ಅಥವಾ ಯಾದವ ಸೈನ್ಯ ಬೇಕೋ ಎಂದು ಕೇಳುತ್ತಾನೆ. ಅರ್ಜುನ ಕೃಷ್ಣನನ್ನೇ ಆಯ್ಕೆ ಮಾಡುತ್ತಾನೆ. ಮುಂದೆ ಅರ್ಜುನನೇ ಗೆಲ್ಲುತ್ತಾನೆ. ಈ ಕಥೆಯಿಂದ ತಿಳಿದು ಬರುವ ತಾತ್ಪರ್ಯವೆಂದರೆ ಭಗವಂತನ ಕೃಪೆ ಹಾಗೂ ಆತ್ಮವಿಶ್ವಾಸವಿದ್ದಾಗ ನಾವು ಯಾವ ಸಾಧನೆಯನ್ನೂ ಮಾಡಬಹುದು ಎಂದು ಮಕ್ಕಳಿಗೆ ಬೋಧಿಸಿದರು. ಭಗವದ್ಗೀತೆ ಎಲ್ಲವನ್ನೂ ಒಳಗೊಂಡ ಶ್ರೇಷ್ಠ ಗ್ರಂಥವಾಗಿದೆ. ನಮ್ಮ ಪರ್ಯಾಯದ ಅವಧಿಯಲ್ಲಿ ಒಂದು ಕೋಟಿ ಜನರಿಂದ ಪೂರ್ಣ ಭಗವದ್ಗೀತೆಯನ್ನು ಬರೆದು ಕೃಷ್ಣನಿಗೆ ಸಮರ್ಪಿಸುವ ಕೋಟಿ ಗೀತಾ ಲೇಖನ ಯಜ್ಞವನ್ನು ಕೈಗೊಂಡಿದ್ದೇವೆ ಅದರಲ್ಲಿ ಹೆಚ್ಚಿನ ಜನರು ಭಾಗವಹಿಸಬೇಕು ಎಂದು ನುಡಿದರು.

ತದನಂತರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದು ಭಕ್ತಾದಿಗಳನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಡಾ. ಕೆ.ಸಿ.ನಾಯ್ಕ್ ಹಾಗೂ ಟ್ರಸ್ಟಿ ಸಗುಣ ಸಿ. ನಾಯ್ಕ್ ಫಲ ಸಮರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಸುಧಾಕರ ಪೇಜಾವರ, ಶ್ರೀ ರಮಣಾಚಾರ್, ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಆದಿಶ್ ಕೆ ಉಪಸ್ಥಿತರಿದ್ದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ಶ್ರೀ ರವಿಶಂಕರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

Advertisement
Tags :
Advertisement