For the best experience, open
https://m.newskannada.com
on your mobile browser.
Advertisement

ಸಾಣೂರು ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ -169 : ಸಮಸ್ಯೆಗಳು ಹತ್ತಾರು

ರಾಷ್ಟ್ರೀಯ ಹೆದ್ದಾರಿ-169 ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಾಣೂರು ಗ್ರಾಮದಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆಯ ಬಿಕರ್ನ ಕಟ್ಟೆಯವರೆಗೆ 45 ಕಿ.ಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಮೇ 10 2016 ರಂದು ಪ್ರಾಥಮಿಕ ಭೂಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಲಾಗಿತ್ತು.
12:15 PM May 14, 2024 IST | Chaitra Kulal
ಸಾಣೂರು ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ  169   ಸಮಸ್ಯೆಗಳು ಹತ್ತಾರು

ಕಾರ್ಕಳ: ರಾಷ್ಟ್ರೀಯ ಹೆದ್ದಾರಿ-169 ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಾಣೂರು ಗ್ರಾಮದಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆಯ ಬಿಕರ್ನ ಕಟ್ಟೆಯವರೆಗೆ 45 ಕಿ.ಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಮೇ 10 2016 ರಂದು ಪ್ರಾಥಮಿಕ ಭೂಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಲಾಗಿತ್ತು.

Advertisement

ಅತಿ ವಿಳಂಬ ಜನ ಹೈರಾಣ: ಇದೀಗ 8 ವರ್ಷಗಳು ಕಳೆದರೂ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ, ಕೃಷಿ ಜಮೀನಿಗೆ ಅತ್ಯಲ್ಪ ಪರಿಹಾರ ಮೊತ್ತ, ಆಗಾಗ ರಸ್ತೆಯ ಅಲೈನ್ಮೆಂಟ್ ಬದಲಾವಣೆಯ ಗೊಂದಲ ಮೊದಲಾದ ವಿಚಾರಗಳಿಂದ ಕುಂಟುತ್ತಾ ಸಾಗಿಬಂದ ಜನರ ಬಹುಕಾಲದ ಬೇಡಿಕೆಯ ರಾಷ್ಟ್ರೀಯ ಹೆದ್ದಾರಿ ಯೋಜನೆಯು ಅನುಷ್ಠಾನ ಹಂತದಲ್ಲಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು, ವಾಹನಗಳ ಸುರಕ್ಷತೆಯನ್ನು ಪಾಲಿಸದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಜನ ಹೈರಾಣವಾಗಿದ್ದಾರೆ.

ಅತಿ ವಿಳಂಬದ ಭೂ ಸರ್ವೇ:  ಕಾರ್ಯ ಮೌಲ್ಯಮಾಪನ, ಭೂಸ್ವಾಧೀನ ಪ್ರಕ್ರಿಯೆಯ ತೊಡಕಿನಿಂದಾಗಿ ಗುತ್ತಿಗೆದಾರ ಕಂಪನಿ ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಗೆ ರಸ್ತೆ ನಿರ್ಮಾಣಕ್ಕೆ ಸರಾಗವಾಗಿ ಭೂಮಿ ಸಿಗದೆ ಅಲ್ಲಲ್ಲಿ ಅರೆಬರೆ ಕಾಮಗಾರಿ ನಡೆಸುವಂತಾಗಿದೆ.

Advertisement

2022 ಅಕ್ಟೋಬರ್ ತಿಂಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ಕಾರ್ಯಾದೇಶವನ್ನು ಪಡೆದ ಗುತ್ತಿಗೆದಾರ ಕಂಪನಿ ಒಪ್ಪಂದದ ಪ್ರಕಾರ 2024 ಅಕ್ಟೋಬರ್ ಒಳಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಮುಗಿಸಿ ಕೊಡಬೇಕಿತ್ತು.

ಪಂಚವಾರ್ಷಿಕ ಯೋಜನೆ: ಒಂದೂವರೆ ವರ್ಷದ ಬಳಿಕ ಇದೀಗ ಅರ್ಧದಷ್ಟು ಕಾಮಗಾರಿಯು ಸರಿಯಾಗಿ ನಡೆದಿಲ್ಲ. ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಮುಗಿಸುವ ಇಚ್ಛಾ ಶಕ್ತಿಯನ್ನು ಸಂಬಂಧಪಟ್ಟವರು ನಡೆಸದಿದ್ದರೆ ರಾಷ್ಟ್ರೀಯ ಹೆದ್ದಾರಿ 169 ಪಂಚವಾರ್ಷಿಕ ಯೋಜನೆಯಾದೀತು.

ಈ ಮಧ್ಯೆ ಜನರು ಅನುಭವಿಸುವ ಕಷ್ಟ ನಷ್ಟಗಳಿಗೆ ಯಾರು ಹೊಣೆ: ಕುಂದು ಕೊರತೆಗಳಿಗೆ ಕಿವುಡಾಗಿರುವ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ದಿಲೀಪ್ ಬಿಲ್ಡ್ ಕಾನ್ ಕಂಪನಿ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು,

ಕುಂದು ಕೊರತೆಗಳು ಹತ್ತಾರು.. ಸಂಕಷ್ಟಗಳು ನೂರಾರು: ಪರಿಹಾರ ವಿತರಣೆಯಲ್ಲಿ ವಿಳಂಬ, ನಿಧಾನ ಗತಿಯಲ್ಲಿ ನಡೆಯುತ್ತಿರುವ ಸರ್ವೆ ಕಾರ್ಯ, ಕಾಮಗಾರಿ ಪ್ರಗತಿಯಲ್ಲಿರುವಾಗ ಪ್ರಯಾಣಿಕರ ಮತ್ತು ವಾಹನಗಳ ಸುರಕ್ಷತೆಗೆ ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳದಿರುವುದು,

ಮಳೆಗಾಲ ಸಮೀಪಿಸುತ್ತಿದ್ದು ಮಳೆನೀರು ಸರಿಯಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಮಾಡದಿರುವುದು, ಸಂಭಾವ್ಯ ಕೃತಕ ನೆರೆಯ ಅಪಾಯ, ತಗ್ಗು ಪ್ರದೇಶ ಮುಳುಗಡೆ ಸಾಧ್ಯತೆ ಇದೆ, ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಗ್ರಾಮಗಳ ಅಡ್ಡರಸ್ತೆಗೆ ಸರಿಯಾದ ಸಂಪರ್ಕ ವ್ಯವಸ್ಥೆಯನ್ನು ಮಾಡದೆ ಕೆಲವು ಕಡೆ ಕೇವಲ ಮಣ್ಣು ಅಥವಾ ಜಲ್ಲಿ ಹರಡಿರುವುದು,

ವಿದ್ಯುತ್ ಕಂಬಗಳ ಮತ್ತು ಟ್ರಾನ್ಸ್ಫಾರ್ಮರ್ ಗಳ ಸ್ಥಳಾಂತರ, ಕಾಲಮಿತಿಯೊಳಗೆ ಮಾಡದಿರುವುದರಿಂದ ಆಗುತ್ತಿರುವ ತೊಂದರೆಗಳು, ಅರೆಬರೆ ಕಾಮಗಾರಿಯಿಂದಾಗಿ ಪ್ರಯಾಣಿಕರಿಗೆ ಮತ್ತು ವಾಹನಗಳಿಗೆ ಆಗುವ ತೊಂದರೆ, ರಾಷ್ಟ್ರೀಯ ಹೆದ್ದಾರಿ ಮುಖ್ಯ ರಸ್ತೆ ಮತ್ತು ಸರ್ವೀಸ್ ರಸ್ತೆ ಸಂಪೂರ್ಣ ಗೊಂಡ ಪ್ರದೇಶದಲ್ಲಿ ಬೀದಿ ದೀಪಗಳ ಅಳವಡಿಕೆ,

ರಾತ್ರಿ ಕತ್ತಲೆಯಲ್ಲಿ ಡೈವರ್ಶನ್ ಸರಿಯಾಗಿ ತಿಳಿಯದೆ ವಾಹನ ಅಪಘಾತಗಳು ನಿರಂತರ ನಡೆಯುತ್ತಿರುವುದು, ರಸ್ತೆ ಬದಿ ತೆರೆವುಗೊಳಿಸಿದ ಮರಗಳಿಗೆ ಬದಲಾಗಿ 10 ಪಟ್ಟು ಹೊಸ ಸಸಿಗಳನ್ನು ರಸ್ತೆ ಬದಿ ನೆಡಲು ಯಾವುದೇ ಮಾಹಿತಿ ಅಥವಾ ಪೂರ್ವ ತಯಾರಿ ನಡೆದಿರದೆ ಇರುವುದು. ರಸ್ತೆ ಬದಿ ಗುಡ್ಡ ಕಡಿದಿರುವ ಜಾಗಕ್ಕೆ ತಡೆಗೋಡೆ ನಿರ್ಮಾಣ ಮಾಡದಿರುವುದು,

ಸರಕಾರಿ ಶಾಲಾ ಕಾಲೇಜು ಜಾಗ, ಸರಕಾರಿ ಕಟ್ಟಡಗಳ ತೆರವುಗೊಳಿಸಿರುವುದಕ್ಕೆ ಇನ್ನೂ ಪರಿಹಾರ ನಿಗದಿಪಡಿಸದೆ ಇರುವುದು. ಬಸ್ಸು ನಿಲ್ದಾಣ ಹಾಗೂ ರಿಕ್ಷಾ ನಿಲ್ದಾಣ ತೆರವುಗೊಳಿಸಿದ ಕಡೆ ಬದಲಿ ಜಾಗ ಗುರುತಿಸದೇ ಇನ್ನೂ ನಿರ್ಮಾಣ ಕಾರ್ಯ ಮಾಡದಿರುವುದು,

ಕುಂದು ಕೊರತೆಗಳು ತುರ್ತಾಗಿ ಆಗಬೇಕಾದ ಕಾರ್ಯಗಳ ಪಟ್ಟಿ ಇನ್ನೂ ತುಂಬಾ ಉದ್ದ ಇದೆ. ಸದ್ಯಕ್ಕೆ ಮೇಲೆ ತಿಳಿಸಿರುವ ವಿಷಯಗಳ ಬಗ್ಗೆ ತುರ್ತು ಗಮನ ಹರಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿದರೆ ಸಾರ್ವಜನಿಕರಿಗಾಗುವ ಅನವಶ್ಯಕ ತೊಂದರೆ, ಅಸುರಕ್ಷತೆ, ಅಭದ್ರತಾ ಭಾವನೆಗಳಿಗೆ ಮುಕ್ತಿ ಸಿಗಬಹುದು.

Advertisement
Tags :
Advertisement