For the best experience, open
https://m.newskannada.com
on your mobile browser.
Advertisement

2024-25ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆ ಆರಂಭ: ಇಲ್ಲಿದೆ ಸಿಎಂ ಬಜೆಟ್‌ ಹೈಲೆಟ್ಸ್‌

2024-25ನೇ ಸಾಲಿನ ರಾಜ್ಯ ಬಜೆಟ್‌ ಅನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮಂಡಿಸುತ್ತಿದ್ದಾರೆ. ಹಣಕಾಸು ಸಚಿವರಾಗಿ 7 ಬಾರಿ ಹಾಗೂ ಸಿಎಂ ಆಗಿ 7 ಬಾರಿ ಬಜೆಟ್‌ ಮಂಡಿಸಿ ರಾಜ್ಯ ಬಜೆಟ್‌ರುವ ಸಿದ್ದರಾಮಯ್ಯ ಇಂದು ತಮ್ಮ 15ನೇ ಬಜೆಟ್‌ ಅನ್ನು ಮಂಡಿಸುವ ಮೂಲಕ ಹೊಸ ದಾಖಲೆ ಬರೆಯುತ್ತಿದ್ದಾರೆ.
10:35 AM Feb 16, 2024 IST | Ashitha S
2024 25ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆ ಆರಂಭ  ಇಲ್ಲಿದೆ ಸಿಎಂ ಬಜೆಟ್‌ ಹೈಲೆಟ್ಸ್‌

ಬೆಂಗಳೂರು: 2024-25ನೇ ಸಾಲಿನ ರಾಜ್ಯ ಬಜೆಟ್‌ ಅನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮಂಡಿಸುತ್ತಿದ್ದಾರೆ. ಹಣಕಾಸು ಸಚಿವರಾಗಿ 7 ಬಾರಿ ಹಾಗೂ ಸಿಎಂ ಆಗಿ 7 ಬಾರಿ ಬಜೆಟ್‌ ಮಂಡಿಸಿ ರಾಜ್ಯ ಬಜೆಟ್‌ರುವ ಸಿದ್ದರಾಮಯ್ಯ ಇಂದು ತಮ್ಮ 15ನೇ ಬಜೆಟ್‌ ಅನ್ನು ಮಂಡಿಸುವ ಮೂಲಕ ಹೊಸ ದಾಖಲೆ ಬರೆಯುತ್ತಿದ್ದಾರೆ.

Advertisement

2024-25ನೇ ಸಾಲಿನ ಬಜೆಟ್ ಒಟ್ಟು ಗಾತ್ರ 3,71,383 ಕೋಟಿ ರೂಪಾಯಿ ಆಗಿದ್ದು, ಕಾಂಗ್ರೆಸ್ ಪಕ್ಷದ ಶಾಲು ಧರಿಸಿರುವ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ.

‘ಆಗದು ಎಂದು ಕೈ ಕಟ್ಟಿ ಕುಳಿತರೆ’ ಹಾಡನ್ನು ಪ್ರಸ್ತಾಪಿಸಿ ಬಜೆಟ್​ ಮಂಡಿಸುತ್ತಿದ್ದಾರೆ. ಕಳೆದ ಬಾರಿ ಜುಲೈನಲ್ಲಿ 3.27 ಲಕ್ಷ ಕೋಟಿಯ ಬಜೆಟ್​ ಮಂಡಿಸಿದ್ದರು. ಆದರೆ ಈ ಬಾರಿ ಬಜೆಟ್ ಗಾತ್ರ 3, 71, 383 ಕೋಟಿಯದ್ದಾಗಿದೆ.

Advertisement

2024-25ರಲ್ಲಿ 57 ಸಾವಿರ ಕೋಟಿ 5 ಗ್ಯಾರಂಟಿಗಳಿಗೆ ಹಂಚಿಕೆ ಮಾಡಲಾಗ್ತಿದೆ. ಜನರ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ, ವಾಸದ ಭದ್ರತೆ ಯೋಜನೆ ಬಗ್ಗೆ ಒತ್ತು ನೀಡಿದೆ.

ಬಜೆಟ್​ ಮಂಡನೆ ವೇಳೆ ಸಿಎಂ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಸರ್ವತ್ರ ವ್ಯಾಪಿಸಬೇಕು. ಅತ್ಯಂತ ಕೀಳಾದವನೂ ಮೇಲಾಗುವಂತೆ ಆಗಬೇಕು. ಕೋಟ್ಯಂತರ ಜನರ ಕೈಗೆ ಗ್ಯಾರಂಟಿ ಯೋಜನೆಗಳ ಹಂಚಿಕೆಯಾಗಬೇಕು. ವಾರ್ಷಿಕ 50-55 ಸಾವಿರ ರೂ. ಪ್ರತಿ ಕುಟುಂಬಕ್ಕೆ ಒದಗಿಸಲಾಗುತ್ತೆ ಎಂದು. ಹೇಳಿದ್ದಾರೆ.

ಭಾರತ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಟ್ಟಿದೆ. ದುಡಿಮೆಯ ಪಾಲು ಹಂಚಬೇಕೆಂಬುದು ನಮಗೆ ಮಾರ್ಗದರ್ಶನ. ಗ್ಯಾರಂಟಿ ಯೋಜನೆಗಳನ್ನ ಅತ್ಯಂತ ಕಡಿಮೆ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಅಲ್ಲ. ನಮ್ಮ ಕಾರ್ಯಕರ್ತರು ಸಂಗ್ರಹಿಸಿದ ಅಭಿಪ್ರಾಯವನ್ನು ಜಾರಿ ಮಾಡಲಾಗುತ್ತಿದೆ. ಸರ್ವೋದಯ, ಸಮನ್ವಯ ದೃಷ್ಟಿ ಎಲ್ಲೆಲ್ಲೂ ತಾಂಡವವಾಡಬೇಕು. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ತ್ವರಿತ ಆರ್ಥಿಕ ಅಭಿವೃದ್ಧಿ ಗುರಿಯನ್ನು ಈ ಬಜೆಟ್​ ಹೊಂದಿದೆ ಎಂದು ಹೇಳಿದ್ದಾರೆ.

ಇಂದು ವಿಧಾನಸಭೆಯಲ್ಲಿ ರಾಜ್ಯ ಬಜೆಟ್ 2024-25 ಮಂಡಿಸಿ ಮಾತನಾಡಿದಂತ  ಸಿಎಂ ಸಿದ್ಧರಾಮಯ್ಯ ಅವರು ಮದ್ಯದ ದರ ಮತ್ತೆ ಹೆಚ್ಚಿಸೋ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದಿಂದ ಮದ್ಯ ಪ್ರಿಯರಿಗೆ ಮತ್ತೆ ಶಾಕ್ ನೀಡಲಾಗಿದೆ. ಬಿಯರ್‌ ಸೇರಿದಂತೆ ಎಲ್ಲ ಬ್ರಾಂಡ್‌ಗಳ ಮದ್ಯದ ದರವನ್ನು ಹೆಚ್ಚಳ ಮಾಡುವುದಕ್ಕೆ ಮುಂದಾಗಿದೆ.

ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್​ ನಿರ್ಮಾಣ ಮಾಡಲಾಗುವುದು. ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ, ಬೆಂಗಳೂರು ಗ್ರಾ. ಜಿಲ್ಲೆ ಮೂಗೆನಹಳ್ಳಿ ಬಳಿ ಆಹಾರ ಪಾರ್ಕ್​ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ತೋಟಗಾರಿಕೆ ಬೆಳೆಗಳಿಗೆ ವಿಜಯಪುರ ಜಿಲ್ಲೆಯು ಹೆಸರುವಾಸಿಯಾಗಿದೆ. ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಳಿಗೆ ಇನ್ನಷ್ಟು ಉತ್ತೇಜನ ನೀಡಲು ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

ಏಷ್ಯಾದಲ್ಲಿಯೇ ಅತಿ ಹೆಚ್ಚು ರೇಷ್ಮೆಗೂಡು ಮಾರಾಟ ವಹಿವಾಟು ನಡೆಸುವ ರಾಮನಗರ ಮತ್ತು ಶಿಡ್ಲಘಟ್ಟದಲ್ಲಿರುವ ರೇಷ್ಮೆ ಮಾರುಕಟ್ಟೆಗಳನ್ನು ಮೊದಲನೇ ಹಂತದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ಮಾರುಕಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ 250 ಕೋಟಿ ರೂ. ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು. ಅಲ್ಲದೇ ಬೈವೋಲ್ಟೀನ್ ರೇಷ್ಮೆಗೂಡುಗಳಿಗೆ ನೀಡುವ ಪ್ರೋತ್ಸಾಹಧನವನ್ನು ಪ್ರತಿ ಕೆಜಿಗೆ ರೂ.30 ಹೆಚ್ಚಳ ಮಾಡಲಾಗಿದೆ.

ಇನ್ನು ಮೀನುಗಾರಿಕೆ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ 3 ಸಾವಿರ ಕೋಟಿ ಯೋಜನೆ ಘೋಷಿಸಿದ್ದಾರೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರನ್ನು ತುರ್ತು ಸಂದರ್ಭಗಳಲ್ಲಿ ರಕ್ಷಣೆಗೆ ಮಾಡುವುದಕ್ಕಾಗಿ ಅತ್ಯಾಧುನಿಕ ಸಮುದ್ರ ಆಂಬುಲೆನ್ಸ್ ಖರೀದಿಸಲಾಗುವುದು ಎಂದು ಅವರು ಘೋಷಣೆ ಮಾಡಿದ್ದಾರೆ.

ಹೊನ್ನಾವರ ಅಥವಾ ಕಾಸರಗೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಭದ್ರಾವತಿಯಲ್ಲಿ ಹೈಟೆಕ್​ ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದರು. ಇದರೊಂದಿಗೆ, ಗ್ರಾಮೀಣ ಪತ್ರಕರ್ತರ ದಶಕಗಳ ಕನಸು ನನಸಾಗಿದೆ.

ಮಂಗಳೂರಿನಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ನಿರ್ಮಾಣ ಮಾಡಲಾಗುವುದು. 35 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

ಇನ್ನು ಬೆಂಗಳೂರು ಉಪ ರೈಲು ಯೋಜನೆ ಚುರುಕುಗೊಳಿಸಲು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ. ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗಿನ ಕಾರಿಡಾರ್-2 ವೇಗವಾಗಿ ಅನುಷ್ಠಾನ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು. ಬಿಎಂಟಿಸಿಗೆ ಹೊಸದಾಗಿ 1334 ಹೊಸ ಇವಿ ಬಸ್‌ ಖರೀದಿಗೆ ನಿರ್ಧಾರ, ಜೊತೆಗೆ ಬಿಎಂಟಿಸಿಗೆ 820 ಬಿಎಸ್‌6 ಡೀಸೆಲ್‌ ಬಸ್‌ ಸೇರ್ಪಡೆ, ಮಹಿಳೆಯರ ಸುರಕ್ಷತೆಗಾಗಿ ಬಿಎಂಟಿಸಿ ಬಸ್‌ಗಳಲ್ಲಿ ಆ್ಯಪ್ ಅನುಷ್ಠಾನ, ವೆಹಿಕಲ್ ಟ್ರ್ಯಾಕಿಂಗ್‌ ಹೊಂದಿರುವ ಆ್ಯಪ್ ಅನುಷ್ಠಾನ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ.

2024ರ ಮೇನಲ್ಲಿ ಕಾವೇರಿ ಹಂತ-5 ಕಾರ್ಯಾರಂಭಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. 5550 ಕೋಟಿ ರೂ. ವೆಚ್ಚದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯಿಂದ ಯೋಜನೆ. ಪ್ರತಿ ದಿನ 12 ಲಕ್ಷ ಜನರಿಗೆ 110 ಲಕ್ಷ ಲೀಟರ್ ಕುಡಿಯುವ ನೀರು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ. ಕಾವೇರಿ ಹಂತ-5ರಡಿ ಡಿಸೆಂಬರ್ 24ರಲ್ಲಿ ಒಳಚರಂಡಿ ಕಾಮಗಾರಿ ಪೂರ್ಣ. ಇದರಿಂದ 228 ಕಿ.ಮೀ ವ್ಯಾಪ್ತಿಯಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದರು.76 ಗೋದಾಮುಗಳ ನಿರ್ಮಾಣಕ್ಕೆ 376 ಕೋಟಿಗಳ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಲಾಗಿದೆ. ಜತೆಗೆ APMCಗಳಲ್ಲಿ ವಿದ್ಯುತ್​ಚಾಲಿತ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆಯೂ ಘೋಷಣೆ ಮಾಡಲಾಗಿದೆ. ಪೆಟ್ರೋಲ್​ ಬಂಕ್​ಗಳ  ಮಾದರಿಯಲ್ಲಿ ಇವುಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತರಿಗೆ 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು. 100 ಕೋಟಿ ವೆಚ್ಚದಲ್ಲಿ 1,000 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಟಿ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ರಾಜ್ಯಾದ್ಯಂತ ಮಹಿಳೆಯರೇ ನಡೆಸುವ 50 ಕೆಫೆ ಹೋಟೆಲಗಳಿಗೆ 7.50ಕೋಟಿ ಮೀಸಲು ಇಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಇಂದು ಬಜೆಟ್ ಅಲ್ಲಿ ತಿಳಿಸಿದರು.ರಾಜ್ಯಾದ್ಯಂತ ಮಹಿಳೆಯರೇ ಸುಮಾರು 50 ಕೆಫೆ ನಡೆಸುತ್ತಿದ್ದಾರೆ ಸರ್ಕಾರದಿಂದ ಕೆಫೆ ಹೋಟೆಲ್ ಗಾಗಿ 7.5 ಕೋಟಿ ರೂಪಾಯಿ ಮೀಸಲು ಇಡಲಾಗಿದೆ.50 ಕೆಫೆ ಹೋಟೆಲ್ ಆಹಾರಕ್ಕೆ ಒತ್ತು ನೀಡಲಾಗಿದೆ ಎಂದರು.ಇನ್ನು ರಾಜ್ಯದಲ್ಲಿ ಸಾಲ ಮರು ಪಾವತಿ ಮಾಡುವಂತ ಮಹಿಳೆಯರಿಗೆ ಶೇ.6ರ ಬಡ್ಡಿದರದಲ್ಲಿ ಸಹಾಯಧನ ನೀಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಗ್ಯಾರಂಟಿ ಯೋಜನೆಯ ಅಡಿಯಲ್ಲಿ ಶಕ್ತಿ, ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಲಾಗಿದೆ. ಈ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಎನ್ನುವಂತೆ ಸಹಾಯಧನ ಸೌಲಭ್ಯವನ್ನು ಒದಗಿಸೋ ಯೋಜನೆಯನ್ನು ಸಿಎಂ ಸಿದ್ಧರಾಮಯ್ಯ ಇಂದಿನ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.ಸುಳ್ಳು ಸುದ್ದಿ ತಡೆಗಟ್ಟಲು ಐಟಿಬಿಟಿ ಇಲಾಖೆಯ ಸಹಯೋಗದಲ್ಲಿ ಸತ್ಯ ತಪಾಸಣಾ ತಂಡ ಹಾಗೂ ವಿಶೇಷ ಕೋಶ ರಚನೆ ಮಾಡಲಾಗುವುದು. ದೀಫ್​ ಫೇಕ್​​ ಹಾಗೂ ಸೈಬರ್ ಕ್ರೈಂ ತಡೆಗೆ 43 ಹೊಸ ಪೊಲೀಸ್​ ಸಿಇಎನ್​ ಠಾಣೆ ಆರಂಭಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ.

ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯದವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ ನೀಡಲಾಗಿದೆ. ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ವಿರಳ ಮತ್ತು ದುಬಾರಿ ವೆಚ್ಚದ ಚಿಕಿತ್ಸೆ ಸೇವೆಗಳನ್ನು ಒದಗಿಸಲು 35 ಕೋಟಿ ರೂ ಗಳ ಕಾರ್ಪಸ್ ಫಂಡ್ ಸ್ಥಾಪಿಸುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ.

ರಾಜ್ಯದ 20 ಸಾವಿರ ಸೈನ್ಸ್​ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗೆ 10 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ.

ವಕ್ಫ್​​ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 100 ಕೋಟಿ ರೂ. ಒದಗಿಸಲಾಗುವುದು. ಜೈನ್​ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ. ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ಪ್ರಸ್ತುತ ನೀಡುತ್ತಿರುವ ಮಾಸಾಶನ 2000 ರೂ. ಗಳಿಗೆ ಹೆಚ್ಚಳ; ಲಿಂಗತ್ವ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆಯಡಿ ನೀಡುವ ಮಾಸಾಶನ 1,200 ರೂ. ಗಳಿಗೆ ಹೆಚ್ಚಳ ಮಾಡಲಾಗುವುದು ಅಂಥ ತಿಳಿಸಿದರು.

ಸರ್ಕಾರಿ ಪ್ರೌಢ ಶಾಲೆಗಳ ಅಭಿವೃದ್ಧಿಗೆ 50 ಕೋಟಿ ರೂ. ಮೀಸಲಿಡಲಾಗುವುದು. ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್​ ಹಾಗೂ ಇಂಟರ್​ನೆಟ್​ ಸೌಲಭ್ಯಕ್ಕೆ 50 ಕೋಟಿ ಪ್ಯಾಕೇಜ್ ನೀಡಲಾಗುವುದು. 2 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಕ, ಉಪನ್ಯಾಸಕರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಕಾಲೇಜು ಸೌಲಭ್ಯಕ್ಕಾಗಿ 250 ಕೋಟಿ ರೂಪಾಯಿ ಮೀಸಲು ಇಡಲಾಗುವುದು. ಖಾಲಿ ಇರುವ ಶಿಕ್ಷಕರ, ದೈಹಿಕ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ಬೆಂಗಳೂರಿನ ಬಡಜನರಿಗೆ ಉಚಿತ ಪ್ರಯೋಗಾಲಯ ಸೇವೆ ಒದಗಿಸಲಾಗುವುದು. ಇದಕ್ಕೆ 430 ಪ್ರಯೋಗಾಲಯಗಳ ಸ್ಥಾಪನೆಗೆ 20 ಕೋಟಿ ಮೀಸಲು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದರು. ವೈದ್ಯಕೀಯ ಕಾಲೇಜುಗಳ ನಿರ್ಮಾಣ, ಉಪಕರಣ ಖರೀದಿಗೆ 400 ಕೋಟಿ ಅನುದಾನ ನೀಡಲಾಗುವುದು. ಸೂಪರ್​ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 130 ಕೋಟಿ ರೂ. ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಇನ್ನು 10 ಮಹಾನಗರ ಪಾಲಿಕೆಗಳಲ್ಲಿ 2,000 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ 2.0 ಯೋಜನೆ ಜಾರಿ ಮಾಡಲಾಗುವುದು ಅಂತ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು. ಇದೇ ವೇಳೆ ಅವರು 441 ಕೋಟಿ ರೂ. ವೆಚ್ಚದಲ್ಲಿ ಒಟ್ಟು 268 ಎಂ.ಎಲ್.ಡಿ. ಸಂಸ್ಕರಣಾ ಸಾಮರ್ಥ್ಯದ 07 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉನ್ನತೀಕರಣ ಅಂತ ತಿಳಿಸಿದರು. ಇದೇ ವೇಳೆ ಪೌರ ನೌಕರರನ್ನು ಹಂತ ಹಂತವಾಗಿ ಖಾಯಂಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಲಾಗಿದೆ ಅಂತ ತಿಳಿಸಿದರು.

ನಿರಾಶ್ರಿತ ಬೌದ್ಧಿಕ ವಿಕಲಚೇತನರ ಆರೈಕೆಗೆ 4 ಕೇಂದ್ರಗಳನ್ನು ಆರಂಭಿಸಲಾಗುವುದು. 4 ಅನುಪಾಲನಾ ಕೇಂದ್ರಗಳ ಸ್ಥಾಪನೆಗೆ 2 ಕೋಟಿ ರೂ. ಅನುದಾನ ಒದಗಿಸಲಾಗುವುದು. 1,500 ವಿಶೇಷ ಚೇತನರಿಗೆ ದ್ವಿಚಕ್ರ ವಾಹನಗಳ ವಿತರಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಇನ್ಮುಂದೆ ಜಾತಿ, ಧರ್ಮ, ಭಾಷೆಯ ಹೆಸರಲ್ಲಿ ಗಲಭೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು 100 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಸೆಕ್ಯೂರಿಟಿ ಕಾರಾಗೃಹ (ಜೈಲು)ವನ್ನು ಶಿವಮೊಗ್ಗದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಬಜೆಟ್​ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

80 ವರ್ಷ ಮೇಲ್ಪಟ್ಟ ಹಿರಿಯರಿಗಾಗಿ ಅನ್ನ ಸುವಿಧಾ ಯೋಜನೆಯನ್ನು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಈ ಯೋಜನೆ ಮೂಲಕ ಅಂಥ ವೃದ್ಧರ ಮನೆ ಬಾಗಿಲಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ, 10 ಜಿಲ್ಲೆಗಳಲ್ಲಿ ವಲಸೆ ನಿರ್ಮಾಣ ಕಾರ್ಮಿಕರಿಗೆ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗುವುದು. ತಾತ್ಕಾಲಿಕ ವಸತಿ ಸಮುಚ್ಚಯಕ್ಕಾಗಿ 100 ಕೋಟಿ ರೂ. ಅನುದಾನ ನೀಡಲಾಗುವುದು. ಕೊಳಗೇರಿ ನಿವಾಸಿಗಳಿಗೆ ಶೀಘ್ರದಲ್ಲೇ 48,796 ಮನೆಗಳ ಹಸ್ತಾಂತರ ಮಾಡಲಾಗುವುದು. ಕಾರ್ಮಿಕರಿಗೆ ESI ಯೋಜನೆಯಡಿ ಸೂಪರ್​ಸ್ಪೆಷಾಲಿಟಿ ಸೇವೆಗೆ 313 ಕೋಟಿ ರೂ. ಅನುದಾನ ಮೀಸಲು ಇಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

ಬಜೆಟ್‌ನಲ್ಲಿ ಸುಧಾರಣಾ ಕ್ರಮಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡಲಿದೆ. ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಏಳನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ವರದಿ ಸ್ವೀಕರಿಸಿದ ನಂತರ ಪರಿಶೀಲಿಸಿ ಕ್ರಮವಹಿಸಲಾಗುವುದು. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ರಚಿಸಲು ವಿವಿಧ ಕಾನೂನಿನಡಿಯಲ್ಲಿ 7,214 ಸಂಸ್ಥೆಗಳ ಶಾಸನಬದ್ಧ ಬ್ಯಾಂಕ್ ಡಿ ಲೆಕ್ಕಪರಿಶೋಧಕರಾಗಿರುತ್ತದೆ. ಈ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ಏಕರೂಪತೆಯನ್ನು ತರಲು ಲೆಕ್ಕಪರಿಶೋಧನಾ ಕಾಯ್ದೆಯನ್ನು ಜಾರಿಗೆ ತರಲಾಗುವುದು. ಸಾರ್ವಜನಿಕರ ಕುಂದುಕೊರತೆ ಹಾಗೂ ಅಹವಾಲುಗಳಿಗೆ ನೇರ ಪರಿಹಾರ ಒದಗಿಸುವ ದೃಷ್ಟಿಯಿಂದ ಜನಸ್ಪಂದನ ಕಾರ್ಯಕ್ರಮವನ್ನು ರಾಜ್ಯ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನಿಯಮಿತವಾಗಿ ಆಯೋಜಿಸಲಾಗುತ್ತಿದೆ. ಈವರೆಗೆ ರಾಜ್ಯಮಟ್ಟದ ಎರಡು ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, 18,000 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮೊದಲ ಕಾರ್ಯಕ್ರಮದಲ್ಲಿ ಒಟ್ಟಾರೆ ಸ್ವೀಕರಿಸಲಾದ ಅಹವಾಲುಗಳ ಪೈಕಿ ಶೇ.94ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಅಂತ ತಿಳಿಸಿದ್ದಾರೆ.

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸೂಫಿ ಅಧ್ಯಯನ ಪೀಠ ಸ್ಥಾಪನೆ ಮಾಡಲಾಗುವುದು. ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸಿದ್ದರಾಮೇಶ್ವರ ಅಧ್ಯಯನ ಪೀಠ ರಚನೆ ಮಾಡಲಾಗುವುದು. ಮಾಜಿ ಸಿಎಂ ಬಂಗಾರಪ್ಪನವರ ಸ್ಮಾರಕ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್​ ಆರಂಭಿಸಲಾಗುವುದು. ಗ್ರಾಮ ಪಂಚಾಯಿತಿಗಳ ಸಭೆ, ಕಾರ್ಯಕಲಾಪಗಳ ನೇರಪ್ರಸಾರ ಮಾಡಲಾಗುವುದು. ರಾಜ್ಯದ 50 ಗ್ರಾ.ಪಂ.ಗಳಿಗೆ ಹೊಂಬೆಳಕು ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಪ್ರತಿ ತಾಲೂಕಿನಲ್ಲಿ ಕನಿಷ್ಠ 2ರಂತೆ ಬೂದುನೀರು ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

ಬೆಂಗಳೂರಿನ 4 ಸ್ಥಳಗಳಲ್ಲಿ ಹೈಟೆಕ್​ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ಕ್ರೀಡಾನಗರ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ. 70 ಎಕರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾನಗರ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ.  ರಾಜ್ಯದ 14 ವರ್ಷದ ಕ್ರೀಡಾಪಟುಗಳಿಗೆ ಮಿನಿ ಒಲಿಂಪಿಕ್ಸ್ ಆಯೋಜನೆ ಮಾಡಲಾಗುವುದು. ರಾಜ್ಯದ ಕ್ರೀಡಾಪಟುಗಳಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಾಗುವುದು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ವಿಮೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸ್ಪೋರ್ಟ್ಸ್​​​​ನಲ್ಲಿ ಯುವಕರು ಹೆಚ್ಚು ಹೆಚ್ಚು ಭಾಗಿಯಾಗಲು, ಅವರಿಗೆ ಇನ್ನಷ್ಟು ಉತ್ತೇಜನ ನೀಡಲು ರಾಜ್ಯ ಸರ್ಕಾರ ಹೊಸ ಯೋಜನೆ ಘೋಷಣೆ ಮಾಡಿದೆ. 2024-25ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು, ಪ್ರತಿ ವರ್ಷವೂ ರಾಜ್ಯ ಮಟ್ಟದ ಮಿನಿ ಒಲಿಂಪಿಕ್ಸ್ ಆಯೋಜನೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಪ್ರತಿ ವರ್ಷವೂ ರಾಜ್ಯ ಮಟ್ಟದ ಮಿನಿ ಒಲಿಂಪಿಕ್ಸ್ ಆಯೋಜನೆ ಮಾಡಲು ಬೆಂಗಳೂರು ಉತ್ತರ ತಾಲೂಕಿನಲ್ಲಿ 70 ಎಕರೆ ವಿಸ್ತೀರ್ಣದಲ್ಲಿ ಸ್ಪೋರ್ಟ್ಸ್ ಸಿಟಿಯನ್ನು ನಿರ್ಮಾಣ ಮಾಡಲಾಗುವುದು. ಈ ಮಿನಿ ಒಲಿಂಪಿಕ್ಸ್​​ನಲ್ಲಿ ಪ್ರಥಮ, ದ್ವಿತಿಯ, ತೃತೀಯ ಸ್ಥಾನ ಪಡೆದವರಿಗೆ ಬಹುಮಾನಗಳನ್ನು ನೀಡಲಾಗುವುದು ಎಂದು ಬಜೆಟ್ ವೇಳೆ ಹೇಳಲಾಗಿದೆ.
ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸುವ ಕ್ರೀಡಾಪಟುಗಳಿಗೆ 6 ಕೋಟಿ ರೂ., ಬೆಳ್ಳಿ ಪದಕ ಪಡೆಯುವ ಇದು ಕ್ರೀಡಾಪಟುಗಳಿಗೆ 4 ಕೋಟಿ ರೂ. ಹಾಗೂ ಕಂಚಿನ ಪದಕ ಪಡೆಯುವ ಕ್ರೀಡಾಪಟುಗಳಿಗೆ 3 ಕೋಟಿ ರೂ. ಪ್ರೋತ್ಸಾಹಧನ ಮುದಿ ನೀಡಲಾಗುವುದು ಎಂದು ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ.

ಕನ್ನಡ ಭಾಷಾಂತರಕ್ಕೆ ನೂತನ ತಂತ್ರಾಂಶ ಅಭಿವೃದ್ಧಿಪಡಿಸಲಾಗುವುದು. ಕನ್ನಡ ಕಸ್ತೂರಿ ಎಂಬ ನೂತನ ತಂತ್ರಾಂಶ ಅಭಿವೃದ್ಧಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದ್ದಾರೆ.

2001 ಕೊಳಗೇರಿ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 1,18,359 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದರ ಬಹುತೇಕ ಫಲಾನುಭವಿಗಳು ಬಡ ಕುಟುಂಬದವರು. ಇವರಿಗೆ ತಮ್ಮ ಪಾಲಿನ ಸುಂಕವಾದ 5 ಲಕ್ಷ ರೂ.ಗಳನ್ನು ಪಾವತಿಸಲು ಆಗುತ್ತಿಲ್ಲದ ಕಾರಣ ಈ ಯೋಜನೆಯು ಮಂದಗತಿಯಲ್ಲಿತ್ತು. ಇದನ್ನು ಮನಗಂಡು ನಮ್ಮ ಸರ್ಕಾರ ಫಲಾನುಭವಿಗಳು ಪಾವತಿಸಬೇಕಿದ್ದ ಸುಂಕವನ್ನ 1 ಲಕ್ಷ ರೂ.ಗಳಿಗೆ ಸೀಮಿತಗೊಳಿಸಿದೆ. ಉಳಿದ ಹೆಚ್ಚುವರಿ 4 ಲಕ್ಷ ರೂ.ವರೆಗಿನ ಫಲಾನುಭವಿ ಸುಂಕ ಸರ್ಕಾರ ಭರಿಸಲು ತೀರ್ಮಾನಿಸಿದೆ. ಶೀಘ್ರದಲ್ಲೇ 48,796 ಮನೆಗಳನ್ನು ಪೂರ್ಣಗೊಳಿಸಿ ಕೊಳಗೇರಿ ನಿವಾಸಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

  • ಶಿಕ್ಷಣ ಇಲಾಖೆ: 44,422 ಕೋಟಿ ರೂಪಾಯಿ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 34,406 ಕೋಟಿ ರೂ.
  • ಇಂಧನ ಇಲಾಖೆ: 23,159 ಕೋಟಿ ರೂಪಾಯಿ
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ: 21,160 ಕೋಟಿ ರೂಪಾಯಿ
  • ಗೃಹ ಮತ್ತು ಸಾರಿಗೆ ಇಲಾಖೆ: 19,777 ಕೋಟಿ ರೂಪಾಯಿ
  • ನೀರಾವರಿ ಇಲಾಖೆ: 19,179 ಕೋಟಿ ರೂಪಾಯಿ
  • ನಗರಾಭಿವೃದ್ಧಿ ಇಲಾಖೆ: 18,155 ಕೋಟಿ ರೂಪಾಯಿ
  • ಕಂದಾಯ ಇಲಾಖೆ: 16,170 ಕೋಟಿ ರೂಪಾಯಿ
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: 15,145 ಕೋಟಿ ರೂ.
  • ಸಮಾಜ ಕಲ್ಯಾಣ ಇಲಾಖೆ: 13,334 ಕೋಟಿ ರೂಪಾಯಿ
  • ಲೋಕೋಪಯೋಗಿ ಇಲಾಖೆ: 10,424 ಕೋಟಿ ರೂಪಾಯಿ
  • ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ: 9,963 ಕೋಟಿ ರೂ.
  • ಕೃಷಿ ಮತ್ತು ತೋಟಗಾರಿಕೆ ಇಲಾಖೆ: 6,688 ಕೋಟಿ ರೂ.
  • ಮೀನುಗಾರಿಕೆ ಮತ್ತು ಪಶುಸಂಗೋಪನೆ: 3,307 ಕೋಟಿ ರೂ.
  • ಇತರ ಇಲಾಖೆಗಳಿಗೆ 1,24,593 ಕೋಟಿ ರೂಪಾಯಿ ಅನುದಾನ

Advertisement
Tags :
Advertisement