For the best experience, open
https://m.newskannada.com
on your mobile browser.
Advertisement

ಬೆಳ್ಳಂಪಳ್ಳಿ: ಖಾಯಂ ಶಿಕ್ಷಕರ‌ ನೇಮಕಾತಿಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಧರಣಿ

ಉಡುಪಿಯ ಕುಕ್ಕೆಹಳ್ಳಿ ಗ್ರಾಮದ ಬೆಳ್ಳಂಪಳ್ಳಿ ಜೈ ಹಿಂದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಶಾಲೆಯ ಮುಂಭಾಗದಲ್ಲಿ ಇಂದು ಧರಣಿ ಸತ್ಯಾಗ್ರಹ ಮಾಡಿದರು. ಈ ಧರಣಿ ಸತ್ಯಾಗ್ರಹಕ್ಕೆ ಶಾಲೆಯ ಗೌರವ ಶಿಕ್ಷಕಿಯರು, ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಹಳೆ ವಿದ್ಯಾರ್ಥಿ ಸಂಘದವರು ಸಾಥ್ ನೀಡಿದರು.
06:06 PM Feb 02, 2024 IST | Gayathri SG
ಬೆಳ್ಳಂಪಳ್ಳಿ  ಖಾಯಂ ಶಿಕ್ಷಕರ‌ ನೇಮಕಾತಿಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಧರಣಿ

ಉಡುಪಿ: ಉಡುಪಿಯ ಕುಕ್ಕೆಹಳ್ಳಿ ಗ್ರಾಮದ ಬೆಳ್ಳಂಪಳ್ಳಿ ಜೈ ಹಿಂದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಶಾಲೆಯ ಮುಂಭಾಗದಲ್ಲಿ ಇಂದು ಧರಣಿ ಸತ್ಯಾಗ್ರಹ ಮಾಡಿದರು. ಈ ಧರಣಿ ಸತ್ಯಾಗ್ರಹಕ್ಕೆ ಶಾಲೆಯ ಗೌರವ ಶಿಕ್ಷಕಿಯರು, ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಹಳೆ ವಿದ್ಯಾರ್ಥಿ ಸಂಘದವರು ಸಾಥ್ ನೀಡಿದರು.

Advertisement

ಶಾಲೆಗೆ ಕೂಡಲೇ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಖಾಯಂ ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನದಿಂದ ಮಕ್ಕಳ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಬ್ರಹ್ಮಾವರ ಕ್ಷೇತ್ರಶಿಕ್ಷಣಾಧಿಕಾರಿ ಶಬಾನ ಅಂಜುಮ್ ಮಾತನಾಡಿ, ಖಾಯಂ ಶಿಕ್ಷಕರ ನೇಮಕಾತಿ ಸರಕಾರದ ಮಟ್ಟದಲ್ಲಿ ಆಗಬೇಕು. ಶಾಲಾ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘದ ಒತ್ತಾಯದ ಮೇರೆಗೆ ತಾತ್ಕಾಲಿಕವಾಗಿ ವಾರಕ್ಕೆ ಒಂದು ದಿನ ಹೆಚ್ಚುವರಿ ಶಿಕ್ಷಕರನ್ನು ನೀಡಿದ್ದೇವೆ. ಆದರೆ, ನಮಗೆ ಖಾಯಂ ಶಿಕ್ಷಕರನ್ನು ನೇಮಕಾತಿ‌ ಮಾಡುವ ಅಧಿಕಾರ ಇಲ್ಲ. ಅದು ಕಮಿಷನರ್ ಮಟ್ಟದಲ್ಲಿ ಆಗಬೇಕು. ಕಾನೂನು ಮೀರಿ ನಮಗೆ ಏನು ಮಾಡಲು ಸಾಧ್ಯವಿಲ್ಲ ಎಂದರು.

Advertisement

ಕ್ಷೇತ್ರಶಿಕ್ಷಣಾಧಿಕಾರಿ ಮಾತಿಗೂ ಸಮಾಧಾನಗೊಳ್ಳದ ಧರಣಿ ನಿರತರು ಪ್ರತಿಭಟನೆ ಮುಂದುವರಿಸಿದರು. ತಮ್ಮ ಪಟ್ಟು ಸಡಿಲಿಸದ ಧರಣಿ ನಿರತರು ಸ್ಥಳಕ್ಕೆ ಡಿಡಿಪಿಐ ಬರಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.

1947 ರಿಂದ ಕಾರ್ಯನಿರ್ವಹಿಸುತ್ತಿರುವ ಈ ಶಾಲೆ ಕಳೆದ ಹಲವು ವರ್ಷಗಳಿಂದ ಖಾಯಂ ಶಿಕ್ಷಕರನ್ನೇ ಕಂಡಿಲ್ಲ. ಶಾಲೆಯ ಶಾಲೆಗೆ ಕಾಯಂ ಶಿಕ್ಷಕರನ್ನ ನೀಡುವ ನೀಡುವಂತೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದೇವೆ. ಕಳೆದ ಆರು ವರ್ಷದಿಂದ ವಾರಕ್ಕೆ ಓರ್ವ ಶಿಕ್ಷಕರು ಮಾತ್ರ ಈ ಶಾಲೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತೊಡಕುಂಟಾಗಿದೆ ಎಂದು ಶಾಲೆಯ ಗೌರವ ಶಿಕ್ಷಕಿ ಮಲ್ಲಿಕಾ ಆಕ್ರೋಶ ವ್ಯಕ್ತಪಡಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಸಹ ಸಂಚಾಲಕ ಹರೀಶ್ ಹೆಗ್ಡೆ, ಹಳೆ ವಿದ್ಯಾರ್ಥಿ ಸಂಘದ ನಾಗರಾಜ್, ಶಾಲಾ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Advertisement
Tags :
Advertisement