For the best experience, open
https://m.newskannada.com
on your mobile browser.
Advertisement

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಇಂಟರ್ ಆ್ಯಕ್ಟಿವ್ ಪ್ಯಾನಲ್ ಡಿಸ್ಪ್ಲೇ ಬೋರ್ಡ್’ ಉದ್ಘಾಟನೆ

ತಂತ್ರಜ್ಞಾನದ ಯುಗದಲ್ಲಿ ಬೋಧಕರು, ವಿದ್ಯಾರ್ಥಿಗಳ ವೇಗಕ್ಕೆ ತಕ್ಕಂತೆ ವೇಗ ವರ್ಧನೆ, ಗುಣ ವರ್ಧನೆ ಮಾಡಿಕೊಂಡು ಮುಂದುವರಿಯುವ ಅಗತ್ಯವಿದ್ದು, ಆ ಮೂಲಕ ವೈಯಕ್ತಿಕ ಅಭಿವೃದ್ಧಿಯೊಂದಿಗೆ ಸಾಂಸ್ಥಿಕ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಕರೆ ಕೊಟ್ಟರು.
04:51 PM Feb 14, 2024 IST | Gayathri SG
ಉಜಿರೆ ಎಸ್ ಡಿ ಎಂ  ಕಾಲೇಜಿನಲ್ಲಿ ‘ಇಂಟರ್ ಆ್ಯಕ್ಟಿವ್ ಪ್ಯಾನಲ್ ಡಿಸ್ಪ್ಲೇ ಬೋರ್ಡ್’ ಉದ್ಘಾಟನೆ

ಉಜಿರೆ: ತಂತ್ರಜ್ಞಾನದ ಯುಗದಲ್ಲಿ ಬೋಧಕರು, ವಿದ್ಯಾರ್ಥಿಗಳ ವೇಗಕ್ಕೆ ತಕ್ಕಂತೆ ವೇಗ ವರ್ಧನೆ, ಗುಣ ವರ್ಧನೆ ಮಾಡಿಕೊಂಡು ಮುಂದುವರಿಯುವ ಅಗತ್ಯವಿದ್ದು, ಆ ಮೂಲಕ ವೈಯಕ್ತಿಕ ಅಭಿವೃದ್ಧಿಯೊಂದಿಗೆ ಸಾಂಸ್ಥಿಕ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಕರೆ ಕೊಟ್ಟರು.

Advertisement

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಅಳವಡಿಸಿರುವ, ತರಗತಿ ಬೋಧನೆ ವೇಳೆ ನಿರ್ದಿಷ್ಟ ವಿಷಯದ ಕುರಿತು ಭಾಷೆ, ಅಕ್ಷರ, ದೃಶ್ಯ ಮತ್ತು ಶ್ರವ್ಯ ಸ್ವರೂಪದಲ್ಲಿ ವಿದ್ಯಾರ್ಥಿಗಳಿಗೆ ಸಮಗ್ರವಾಗಿ ಮನವರಿಕೆ ಮಾಡಿಕೊಡುವ ‘ಇಂಟರ್ ಆ್ಯಕ್ಟಿವ್ ಪ್ಯಾನಲ್ ಡಿಸ್ಪ್ಲೇ ಬೋರ್ಡ್’ ಅನ್ನು ಇಂದು ಅವರು ಉದ್ಘಾಟಿಸಿ ಬೋಧಕ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಸವಾಲುಗಳು ಹೆಚ್ಚುತ್ತಿದ್ದು, ಬೋಧಕರು ಬದಲಾವಣೆಯ ವೇಗಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಚಿತ್ರಗಳು ಸಹಿತ ಇತರ ಪೂರಕ ಮಾಹಿತಿಯೊಂದಿಗೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಹೆಚ್ಚು ಪರಿಣಾಮಕಾರಿ. ಆ ನಿಟ್ಟಿನಲ್ಲಿ, ‘ಇಂಟರ್ ಆ್ಯಕ್ಟಿವ್ ಪ್ಯಾನಲ್ ಡಿಸ್ಪ್ಲೇ ಬೋರ್ಡ್’ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Advertisement

“ಎಸ್.ಡಿ.ಎಂ. ಕಾಲೇಜಿನಲ್ಲಿ ಬೋಧನೆಗೆ ಅತ್ಯಾಧುನಿಕ ವ್ಯವಸ್ಥೆ ಇರಬೇಕೆಂಬುದು ನನ್ನ ಇಚ್ಛೆ. ಜತೆಗೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ.)ಯ ಎಲ್ಲ ಶಾಲೆ-ಕಾಲೇಜುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, ಪೂರ್ವ ಕಾರ್ಯದರ್ಶಿ ದಿ. ಡಾ. ಬಿ. ಯಶೋವರ್ಮ ಅವರು ಗಟ್ಟಿ ತಳಪಾಯ ಹಾಕಿಕೊಟ್ಟಿದ್ದಾರೆ. ಅವರ ಆಡಳಿತದ ಅನುಭವವನ್ನು ನೀವು ಪಡೆದಿದ್ದೀರಿ. ವಿದ್ಯಾರ್ಥಿಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಎಲ್ಲ ಸೌಲಭ್ಯಗಳನ್ನು ಸಂಸ್ಥೆ ಒದಗಿಸುತ್ತದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು” ಎಂದು ಅವರು ಸೂಚಿಸಿದರು.

ಸೆನ್ಸಸ್ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸೇಲ್ಸ್ ವಿಭಾಗದ ಎಕ್ಸಿಕ್ಯೂಟಿವ್ ಕೃಪಾಲ್ ಡಿ’ಸೋಜಾ ಅವರು ‘ಇಂಟರ್ ಆ್ಯಕ್ಟಿವ್ ಪ್ಯಾನಲ್ ಡಿಸ್ಪ್ಲೇ ಬೋರ್ಡ್’ ಬಳಕೆ ಮತ್ತು ವೈಶಿಷ್ಟ್ಯ ವಿವರಿಸಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಇನ್ನೋರ್ವ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹಾಗೂ ಐಟಿ ಮತ್ತು ವಿದ್ಯಾರ್ಥಿನಿಲಯಗಳ ಆಡಳಿತ ವಿಭಾಗದ ಸಿಇಒ ಪೂರನ್ ವರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವಿಸಿದರು. ಪರೀಕ್ಷಾಂಗ ಕುಲಸಚಿವೆ ಪ್ರೊ. ನಂದಾಕುಮಾರಿ ವಂದಿಸಿದರು. ಉಪ ಪ್ರಾಂಶುಪಾಲ ಪ್ರೊ. ಎಸ್.ಎನ್. ಕಾಕತ್ಕರ್ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ಸ್ಥಳೀಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.

‘ಇಂಟರ್ ಆ್ಯಕ್ಟಿವ್ ಪ್ಯಾನಲ್ ಡಿಸ್ಪ್ಲೇ ಬೋರ್ಡ್’

ಬೋಧನಾ ವಿಷಯದ ಕುರಿತು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವ ಅನೇಕ ವಿಧದ ಮಾದರಿಗಳನ್ನು ಈ ಇಂಟರ್ ಆ್ಯಕ್ಟಿವ್ ಪ್ಯಾನಲ್ ಡಿಸ್ಪ್ಲೇ ಬೋರ್ಡ್’ನಲ್ಲಿ ಕಲ್ಪಿಸಿಕೊಡಲಾಗಿದೆ. ಪಠ್ಯವಿಷಯದ ನಿರ್ದಿಷ್ಟ ಶೀರ್ಷಿಕೆ ನಿರೀಕ್ಷಿಸುವ ಸಮಗ್ರ ವಿವರಗಳನ್ನು ಕ್ಷಣಾರ್ಧದಲ್ಲಿ ಕಾಣಿಸುತ್ತಾ ಮನವರಿಕೆ ಮಾಡಿಕೊಡುವ ವಿಧಾನದೊಂದಿಗೆ ಬೋಧನೆಯನ್ನು ಇನ್ನಷ್ಟು ವಿದ್ಯಾರ್ಥಿಸ್ನೇಹಿಯಾಗಿಸುವ ಪ್ರಯೋಗ ನಡೆಸಲು ಇದು ಪೂರಕವಾಗಲಿದೆ.

ಇದರ ನೆರವಿನೊಂದಿಗೆ ತರಗತಿಯನ್ನು ನಿರ್ವಹಿಸುವಾಗ ಲ್ಯಾಪ್ಟಾಪ್ ತೆಗೆದುಕೊಂಡು ಹೋಗಬೇಕಿಲ್ಲ. ಸ್ಮಾರ್ಟ್ ಡಸ್ಟರ್ ಕೂಡ ಬಳಸಬೇಕಿಲ್ಲ. ಕೈ ಅಥವಾ ವೈಪಿಂಗ್ ಕ್ಲಾಥ್ ಮೂಲಕ ಸ್ಮಾರ್ಟ್ ಬೋರ್ಡ್ ಮೇಲೆ ಬರೆದದ್ದನ್ನು ಅಳಿಸಿಹಾಕಬಹುದು. ಗೂಗಲ್ ಮೂಲಕ ಬೇಕಾದ ಮಾಹಿತಿಯನ್ನು ಕಾಣಿಸಿ ಡೌನ್ಲೋಡ್ ಮಾಡಿ ಆ ಕ್ಷಣಕ್ಕೆ ಅಗತ್ಯವಿರುವ ಮಾಹಿತಿಯನ್ನಷ್ಟೇ ಕಾಣಿಸಿ ವಿದ್ಯಾರ್ಥಿಗಳ ಗ್ರಹಿಕೆಗೆ ಅನುವುಮಾಡಿಕೊಡಬಹುದು. ಸ್ಮಾರ್ಟ್ ಸ್ಕ್ರೀನ್ ಮೇಲೆ ಆ ಕ್ಷಣಕ್ಕೆ ಬರೆದು ಅದಕ್ಕನುಗುಣವಾಗಿ ಬೇಕಾದ ವಿಡೀಯೋವನ್ನು ಕಾಣಿಸುತ್ತಾ ಮತ್ತಷ್ಟು ವಿವರಗಳನ್ನು ಬರೆದು ವಿದ್ಯಾರ್ಥಿಗಳ ಕಲಿಕೆಯನ್ನು ಆಸಕ್ತಿದಾಯಕವಾಗಿಸಬಹುದಾಗಿದೆ.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರ ವಿಶೇಷ ಕಾಳಜಿಯೊಂದಿಗೆ ಈ ಬೋರ್ಡ್ ಅಳವಡಿಕೆಯಾಗಿದೆ. ಉಜಿರೆಯ ಎಸ್.ಡಿ.ಎಂ. ಕಾಲೇಜು, ಸ್ನಾತಕೋತ್ತರ ಕೇಂದ್ರ, ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಲ್ಲಿ ಬೋರ್ಡ್ ಅನ್ನು ಆರಂಭಿಕವಾಗಿ ಅಳವಡಿಸಲಾಗಿದೆ. ನಂತರದ ದಿನಗಳಲ್ಲಿ ಹೆಚ್ಚು ಬೋರ್ಡ್ ಅಳವಡಿಸಿ ಸಂಪೂರ್ಣವಾಗಿ ಡಿಜಿಟಲೀಕೃತ ಬೋಧನಾನುಭವವನ್ನು ವಿದ್ಯಾರ್ಥಿಗಳಿಗೆ ನೀಡುವ ಗುರಿ ಹೊಂದಲಾಗಿದೆ.

Advertisement
Tags :
Advertisement