For the best experience, open
https://m.newskannada.com
on your mobile browser.
Advertisement

ಜಂಗಿ ಕುಸ್ತಿ ಸ್ಪರ್ಧೆ: ಬಾಲಕನನ್ನು ಮಣಿಸಿದ ಬಾಲಕಿ

ತಾಲ್ಲೂಕಿನ ಅಷ್ಟೂರಿನಲ್ಲಿ ಜಾತ್ರೆ ನಿಮಿತ್ತ ಶುಕ್ರವಾರ ನಡೆದ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ 10 ವರ್ಷದ ಬಾಲಕಿ ಶ್ವೇತಾ ರಾಮೇಶ್ವರ ಕಾರಲೆ ತನ್ನದೇ ವಯಸ್ಸಿನ ಬಾಲಕನ್ನು ಸೋಲಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.
07:42 AM Apr 06, 2024 IST | Ashika S
ಜಂಗಿ ಕುಸ್ತಿ ಸ್ಪರ್ಧೆ  ಬಾಲಕನನ್ನು ಮಣಿಸಿದ ಬಾಲಕಿ

ಬೀದರ್: ತಾಲ್ಲೂಕಿನ ಅಷ್ಟೂರಿನಲ್ಲಿ ಜಾತ್ರೆ ನಿಮಿತ್ತ ಶುಕ್ರವಾರ ನಡೆದ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ 10 ವರ್ಷದ ಬಾಲಕಿ ಶ್ವೇತಾ ರಾಮೇಶ್ವರ ಕಾರಲೆ ತನ್ನದೇ ವಯಸ್ಸಿನ ಬಾಲಕನ್ನು ಸೋಲಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.

Advertisement

ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯ ಲೋಹಾರಾದ ಶ್ವೇತಾ ರಾಮೇಶ್ವರ ಕಾರಲೆ ಅವರು ಲಾತೂರಿನ ಸಮರ್ಥನನ್ನು ಮಣಿಸಿದ್ದಾಳೆ.

ಚಿಂಚೋಳಿಯ ಬಾಲಕಿಯೊಂದಿಗೆ ನಡೆದ ಕುಸ್ತಿಯಲ್ಲೂ ಶ್ವೇತಾ ಜಯಗಳಿಸಿದ್ದಳು.

Advertisement

ಜಾತ್ರೆಯಲ್ಲಿ ಮೊದಲ ಬಾರಿಗೆ ಬಾಲಕ ಮತ್ತು ಬಾಲಕಿ ಮಧ್ಯೆ ಕುಸ್ತಿ ನಡೆದಿದ್ದು ರಾಮೇಶ್ವರ ಅವರು ತಮ್ಮ ಮಗಳು ಶ್ವೇತಾಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಇತರ ಗಣ್ಯರು ಬಾಲಕಿಗೆ ನಗದು ಬಹುಮಾನ ಕೊಟ್ಟು ಪ್ರೋತ್ಸಾಹಿಸಿದರು.

₹200 ಯಿಂದ ₹5,000 ವರೆಗಿನ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಲಬುರಗಿ ಜಿಲ್ಲೆಯ ಕಮಲಾಪುರದ ಪ್ರವೀಣ್ ಅಷ್ಟೂರ ಜಾತ್ರೆ ಕುಸ್ತಿ ವೀರರಾಗಿ ಹೊರ ಹೊಮ್ಮಿದರು. ₹5 ಸಾವಿರ ನಗದು ಬಹಮಾನಕ್ಕೂ ಭಾಜನರಾದರು.

ಪ್ರವೀಣ್ ಹಾಗೂ ಸುರಪುರದ ಬಸವರಾಜ ನಡುವಿನ ಕೊನೆಯ ಕುಸ್ತಿ ಜಿದ್ದಾಜಿದ್ದಿನಿಂದ ಕೂಡಿತ್ತು. ಪ್ರವೀಣ್, ವಿವಿಧ ಪಟ್ಟುಗಳನ್ನು ಬಳಸಿ ಎದುರಾಳಿಯನ್ನು 'ಚಿತ್' ಮಾಡಿ ವಿಜಯ ಪತಾಕೆ ಹಾರಿಸಿದರು.

ಒಟ್ಟು 65 ಪಂದ್ಯಗಳು ನಡೆದವು. ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಪೈಲ್ವಾನರು ಅಖಾಡದಲ್ಲಿದ್ದರು. ಪ್ರೇಕ್ಷಕರು ತಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಪೈಲ್ವಾನರನ್ನು ಹುರಿದುಂಬಿಸಿದರು.

ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರಾವ್ ಮಲ್ಕಾಪುರ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯಕುಮಾರ ಆನಂದೆ, ಬಿಜೆಪಿ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ಸದಾನಂದ ಜೋಶಿ, ಮುಖಂಡರಾದ ವಿಜಯಕುಮಾರ ಪಾಟೀಲ ಖಾಜಾಪುರ, ಶಶಿಧರ ಪಾಟೀಲ ಅಷ್ಟೂರ, ವಿವೇಕ ಪಸರ್ಗೆ, ಶಿವಕುಮಾರ ನಾಗಲಗಿದ್ದಿ, ರಾಹುಲ್ ಮೋರೆ, ಅರ್ಜುನರಾವ್ ಕಾಳಗೊಂಡ ಮೊದಲಾದವರು ಪಾಲ್ಗೊಂಡಿದ್ದರು.

Advertisement
Tags :
Advertisement