ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಾನವೀಯತೆಯಿದ್ದರೆ ಮಾತ್ರ ಉತ್ತಮ ನ್ಯಾಯಮೂರ್ತಿಯಾಗಲು ಸಾಧ್ಯ

ಉತ್ತಮ ಮಾನವೀಯ ವ್ಯಕ್ತಿಯಾಗಿದ್ದರೆ ಮಾತ್ರ ಅತ್ಯುತ್ತಮ ನ್ಯಾಯಮೂರ್ತಿಯಾಗಲು ಸಾಧ್ಯ ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಆರ್.ಎಫ್. ನಾರಿಮನ್‌ ಹೇಳಿದ್ದಾರೆ.
05:57 PM Jan 21, 2024 IST | Ashika S

ಬೆಂಗಳೂರು: ಉತ್ತಮ ಮಾನವೀಯ ವ್ಯಕ್ತಿಯಾಗಿದ್ದರೆ ಮಾತ್ರ ಅತ್ಯುತ್ತಮ ನ್ಯಾಯಮೂರ್ತಿಯಾಗಲು ಸಾಧ್ಯ ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಆರ್.ಎಫ್. ನಾರಿಮನ್‌ ಹೇಳಿದ್ದಾರೆ.

Advertisement

ನಗರದ ಚೌಡಯ್ಯ ಮೆಮೊರಿಯಲ್ ಸಭಾಂಗಣದಲ್ಲಿ ನ್ಯಾ ಡಾ. ಶಿವರಾಜ ವಿ. ಪಾಟೀಲರ ಆತ್ಮ ಕಥನ “ಕಳೆದ ಕಾಲ ನಡೆದ ದೂರ (ಕನ್ನಡ)” ಹಾಗೂ “ಟೈಮ್ಸ್‌ ಸ್ಪೆಂಟ್‌ ಡಿಸ್ಟೆನ್ಸ್‌ ಟ್ರಾವೆಲ್ಡ್” (ಇಂಗ್ಲೀಷ್‌) ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ನ್ಯಾಯಮೂರ್ತಿಯಾದವರು ಸಂವಿಧಾನದ ಸತ್‌ ಸಂಪ್ರದಾಯಗಳನ್ನು ಎತ್ತಿ ಹಿಡಿಯಬೇಕು. ಮೌಲ್ಯಗಳನ್ನು ಕಾಪಾಡಬೇಕು. ನ್ಯಾಯಮೂರ್ತಿಗಳು ವಾದ – ಪ್ರತಿವಾದಗಳನ್ನು ಆಸಕ್ತಿಯಿಂದ ಆಲಿಸಬೇಕು. ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ನ್ಯಾಯಾಂಗ ವ್ಯವಸ್ಥೆಯಲ್ಲಿ ನಾವೀನ್ಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ನಮ್ಮ ಕೆಲಸಗಳೇ ನಮಗೆ ಕಾವಲು ನಾಯಿ ಆಗಬೇಕು. ಇದೇ ನಮ್ಮ ಯಶಸ್ಸಿನ ಮಾನದಂಡವಾಗಲಿದೆ. ಇಂತಹ ಸತ್‌ ಸಂಪ್ರದಾಯವನ್ನು ಜಸ್ಟೀಸ್‌ ಡಾ. ಶಿವರಾಜ ವಿ. ಪಾಟೀಲ ಹಾಕಿಕೊಟ್ಟಿದ್ಧಾರೆ. ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾದರಿಯಾಗಿದ್ದಾರೆ. ನ್ಯಾಯವಾದಿಯಾಗಿ, ನ್ಯಾಯಮೂರ್ತಿಯಾಗಿ ತನ್ನದೇ ಆದ ಹೆಗ್ಗುರುತು ಮೂಡಿಸಿದ್ದಾರೆ ಎಂದರು.

Advertisement

ನ್ಯಾಯಾಂಗ ವ್ಯವಸ್ಥೆಯಲ್ಲಿ ನಮ್ಮ ಪೂರ್ವೀಕರು ಹಲವಾರು ಉತ್ತಮ ಸಂಪ್ರದಾಯಗಳನ್ನು ಹಾಕಿಕೊಟ್ಟಿದ್ದು, ಅದನ್ನು ಪರಿಪಾಲಿಸಬೇಕಿದೆ. ಕೇಶವಾನಂದ ಪ್ರಕರಣದಲ್ಲಿ ಸಂವಿಧಾನದ ಮೂಲ ರಚನೆಯನ್ನು ಬದಲಿಸಬಾರದು ಎಂದು ತೀರ್ಪು ನೀಡಿರುವುದು ಅತ್ಯಂತ ಪ್ರಮುಖವಾದದ್ದು, ಇಂತಹ ಹಲವಾರು ಚಾರಿತ್ರಿಕ ತೀರ್ಪುಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಚ್ಚಳಿಯದ ಪ್ರಭಾವ ಬೀರಿವೆ ಎಂದರು.

ತರಳಬಾಳು ಬೃಹನ್ಮಠದ ಸಿರಿಗೆರೆಯ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯರಿಗೆ ಸಕಾರಾತ್ಮಕ ಚಿಂತನೆ, ಆಶಾದಾಯಕ ಧೋರಣೆ ಅತ್ಯಂತ ಅಗತ್ಯವಾಗಿದೆ. ಜಸ್ಟೀಸ್‌ ಶಿವರಾಜ್‌ ವಿ ಪಾಟೀಲ್‌ ಅವರದ್ದು ಇಂತಹ ಉತ್ತಮ ಚಿಂತನೆ, ಆಲೋಚನೆಗಳನ್ನು ಹೊಂದಿರುವ ಕುಟುಂಬವಾಗಿದೆ. ಶಿವರಾಜ್‌ ಪಾಟೀಲ್‌ ಅವರ ಆತ್ಮಕಥನ ಎಲ್ಲರಿಗೂ ಮಾದರಿ ಎಂದರು.

ನ್ಯಾಯಮೂರ್ತಿ ಶಿವರಾಜ್‌ ವಿ ಪಾಟೀಲ್‌ ಮಾತನಾಡಿ, ತಮ್ಮ ವೃತ್ತಿ ಬದುಕಿನ ಹಲವು ಆಯಾಮಗಳು, ಅಮೂಲ್ಯ ಘಟನೆಗಳನ್ನು ಮೆಲುಕು ಹಾಕಿದರು. ಕನ್ನಡ ನಾಡು ಹಲವಾರು ಸಾಧು – ಸಂತರ ನೆಲವೀಡು. ಸಿದ್ಧೇಶ್ವರ ಸ್ವಾಮೀಜಿ ಅವರು ಈ ಶತಮಾನದ ಸಂತ. ತುಮಕೂರು ಸಿದ್ದಗಂಗಾ ಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮೀಜಿ ಅವರಂತಹ ಸಾಧು ಸಂತರ ಜೊತೆಗಿನ ಒಡನಾಟ ಬದುಕಿನ ಅಮೂಲ್ಯ ಕ್ಷಣಗಳು ಎಂದರು.

Advertisement
Tags :
LatetsNewsNewsKannadaಆರ್.ಎಫ್. ನಾರಿಮನ್‌ನ್ಯಾಯಮೂರ್ತಿಮಾನವೀಯಸರ್ವೋಚ್ಛ ನ್ಯಾಯಾಲಯ
Advertisement
Next Article