ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸದಾ ಕಾಡುವ ಬೆನ್ನು ನೋವು ತಡೆಯಲು ಏನು ಮಾಡಬೇಕು?

ಬೆನ್ನು ನೋವು ಯಾವಾಗ ಬೇಕಾದರೂ ನಮ್ಮನ್ನು ಕಾಡಬಹುದು. ಅದರಲ್ಲೂ ಅಪರೂಪಕ್ಕೆ ದೈಹಿಕ ಶ್ರಮದ ಕೆಲಸ ಮಾಡಿಬಿಟ್ಟರಂತೂ ತಕ್ಷಣವೇ ಬೆನ್ನು ನೋವು ಕಾಣಿಸಿಕೊಂಡು ಬಿಡುತ್ತದೆ. ಅದರಲ್ಲೂ ಕುಳಿತು, ಬಗ್ಗಿ ಕೆಲಸ ಮಾಡುವವರಲ್ಲಿ, ತುಸು ಹೆಚ್ಚಾಗಿ ಕಂಡು ಬರುತ್ತದೆ.
12:45 PM Jan 12, 2024 IST | Gayathri SG

ಬೆನ್ನು ನೋವು ಯಾವಾಗ ಬೇಕಾದರೂ ನಮ್ಮನ್ನು ಕಾಡಬಹುದು. ಅದರಲ್ಲೂ ಅಪರೂಪಕ್ಕೆ ದೈಹಿಕ ಶ್ರಮದ ಕೆಲಸ ಮಾಡಿಬಿಟ್ಟರಂತೂ ತಕ್ಷಣವೇ ಬೆನ್ನು ನೋವು ಕಾಣಿಸಿಕೊಂಡು ಬಿಡುತ್ತದೆ. ಅದರಲ್ಲೂ ಕುಳಿತು, ಬಗ್ಗಿ ಕೆಲಸ ಮಾಡುವವರಲ್ಲಿ, ತುಸು ಹೆಚ್ಚಾಗಿ ಕಂಡು ಬರುತ್ತದೆ.

Advertisement

ಹಾಗೆನೋಡಿದರೆ ದೇಹಕ್ಕೆ ಆಗುವ ಪ್ರತಿಯೊಂದು ನೋವು ಕೂಡ ನರಕಯಾತನೆಯೇ ಅದರಲ್ಲೂ ದೀರ್ಘ ಕಾಲದ ನೋವುಗಳು ಮನುಷ್ಯನನ್ನು ಜೀವಂತವಾಗಿಯೇ ಸಾಯಿಸುತ್ತಿರುತ್ತದೆ. ಇವತ್ತು ನಾವು ಆರೋಗ್ಯವಾಗಿದ್ದರೆ ಸಾಕು ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ. ಇದಕ್ಕೆ ಕಾರಣವೂ ನಾವೇ ಎಂದರೆ ತಪ್ಪಾಗಲಾರದು. ನಾವೆಲ್ಲರೂ ಕೂಡ ದೇಹದಂಡಿಸಿ ದುಡಿಯದೆ ಹಗುರವಾಗಿರಬೇಕೆಂದು ಬಯಸುತ್ತೇವೆ. ವಾಹನಗಳು ಮನೆ ಬಾಗಿಲಲ್ಲೇ ಇರುವುದರಿಂದ ನಡಿಗೆ ಮರೆತಿದೆ ಹೀಗಾಗಿ ಸದಾ ವಿಶ್ರಾಂತಿಯಲ್ಲಿರುವ ದೇಹ ಕೆಲವು ಸಂದರ್ಭಗಳಲ್ಲಿ ಕಾಯಿಲೆಗಳನ್ನು ಬಹು ಬೇಗ ಆಹ್ವಾನಿಸಿ ಬಿಡುತ್ತದೆ. ಇದಾಗ ಬಾರದು ಎನ್ನುವುದಾದರೆ ನಾವು ಒಂದಿಷ್ಟು ದೇಹಕ್ಕೆ ಕೆಲಸ ಕೊಡಲೇ ಬೇಕು. ಇಲ್ಲದೆ ಹೋದರೆ ಅಪರೂಪಕ್ಕೆ ದೈಹಿಕ ಶ್ರಮದ ಕೆಲಸ ಮಾಡಿದಾಗ ಬೆನ್ನು ನೋವು ಕಾಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಬೆನ್ನು ನೋವನ್ನು ಶಮನಗೊಳಿಸಲು ಫಿಜಿಯೋಥೆರಪಿ ಸೇರಿದಂತೆ ಹಲವು ವೈದ್ಯಕೀಯ ಚಿಕಿತ್ಸೆಗಳಿದ್ದರೂ ಕೆಲವೊಂದು ವ್ಯಾಯಾಮಗಳ ಮೂಲಕವೂ ಇದನ್ನು ನಿಯಂತ್ರಿಸಲು ಸಾಧ್ಯವಿದೆ. ವೈದ್ಯರ ಪ್ರಕಾರ ಬೆನ್ನಿನ ಸ್ನಾಯು ದುರ್ಬಲವಾದರೆ ಬೆನ್ನು ನೋವು ಕಾಣಿಸುತ್ತದೆ. ಹೀಗಾಗಿ ಸ್ನಾಯುಗಳನ್ನು ಬಲಪಡಿಸುವ ಕೆಲಸವನ್ನು ವ್ಯಾಯಾಮದ ಮೂಲಕ ಮಾಡುವುದು ಅತಿ ಮುಖ್ಯವಾಗಿದೆ. ವೈದ್ಯರು ಶಿಫಾರಸ್ಸು ಮಾಡಿದ ಮೂರು ವ್ಯಾಯಾಮಗಳು ಮತ್ತು ಒಂದಷ್ಟು ಸಲಹೆಗಳು ಬಹುಶಃ ಬೆನ್ನು ನೋವಿನಿಂದ ಬಳಲುವವರಿಗೆ ಅಥವಾ ಬೆನ್ನು ನೋವು ಬಾರದಂತೆ ತಡೆಯುವವರಿಗೆ ಅನುಕೂಲವಾಗಲಿದೆ ಎಂದರೆ ತಪ್ಪಾಗಲಾರದು.

Advertisement

ಇಷ್ಟಕ್ಕೂ ಬೆನ್ನು ನೋವು ಕಡಿಮೆ ಮಾಡಲು ಇರುವ ಆ ವ್ಯಾಯಾಮ ಯಾವುದು ಎಂಬ ಕುತೂಹಲ ಇದ್ದೇ ಇರುತ್ತದೆ. ಅದರ ಬಗ್ಗೆ ಹೇಳುವುದಾದರೆ, ಮೊದಲನೆಯದಾಗಿ ಕಾಲುಗಳನ್ನು ನೇರವಾಗಿಸಿ ಅಂಗಾತ ಮಲಗಬೇಕು. ಕೈಗಳನ್ನು ಪಕ್ಕದಲ್ಲಿಟ್ಟುಕೊಳ್ಳಬೇಕು. ಆ ನಂತರ ಮಂಡಿಯನ್ನು ಮೇಲೆತ್ತುತ್ತಾ ನಿಧಾನವಾಗಿ ಎದೆಯ ಕಡೆಗೆ ತರಬೇಕು. ಹೀಗೆ ಹತ್ತು ಬಾರಿ ಮಾಡಬೇಕು. ಎರಡನೆಯದರಲ್ಲಿ ಮಂಡಿಗಳನ್ನು ಮಡಚಿ, ಪಾದಗಳನ್ನು ನೆಲಕ್ಕೂರಬೇಕು ಆ ನಂತರ ಮಡಚಿದ ಟವೆಲ್ ಮೇಲೆ ತಲೆಯನ್ನಿಟ್ಟು ಅಂಗಾತವಾಗಿ ಮಲಗಿ ನಿಧಾನವಾಗಿ ಕೆಳಭಾಗವನ್ನು ಮೇಲಕ್ಕೆತ್ತಿ ಇಳಿಸಬೇಕು. ಹೀಗೆ ಕನಿಷ್ಟ ಹತ್ತು ಬಾರಿ ಮಾಡಬೇಕು.

ಮೂರನೆಯ ವ್ಯಾಯಾಮದಲ್ಲಿ ಕೈಗಳು ಪಕ್ಕಗಳಲ್ಲಿ ಸಡಿಲವಾಗಿ ನೇತಾಡುವಂತೆ ನೇರವಾಗಿ ನಿಂತುಕೊಳ್ಳಬೇಕು. ಆ ನಂತರ ಭುಜಗಳನ್ನು ಹಿಂದಕ್ಕೆ ಹಿಡಿಯಬೇಕು. ಬಳಿಕ ಸೊಂಟದಿಂದ ನಿಧಾನವಾಗಿ ಮುಂದೆ ಬಾಗುತ್ತಾ ತಲೆ ಮತ್ತು ಕೈಗಳು ಮುಂದಕ್ಕೆ ಬೀಳುವಂತೆ ಮಾಡುತ್ತಾ ಕಾಲುಬೆರಳುಗಳನ್ನು ಸ್ಪರ್ಶಿಸಬೇಕು. ಹೀಗೆ ಮಾಡುವಾಗ ಮಂಡಿಗಳು ಬಾಗದಂತೆ ನೋಡಿಕೊಳ್ಳಬೇಕು. ಇದನ್ನು ಕೂಡ ಹತ್ತು ಬಾರಿ ಮಾಡಬೇಕು.

ವ್ಯಾಯಾಮಗಳನ್ನು ಆರಂಭಿಸುವಾಗಲೇ ಮಾನಸಿಕವಾಗಿ ದೃಢವಾಗಿರಬೇಕು. ಯಾವುದೇ ಆಗಲಿ ಒಮ್ಮೆಗೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿದಿನವೂ ಒಂದೊಂದೇ ಹೆಚ್ಚಿಸುತ್ತಾ ಹತ್ತಕ್ಕೆ ಬಂದು ನಿಲ್ಲಿಸಬಹುದು. ಬಳಿಕ ಪ್ರತಿದಿನವೂ ಒಂದೊಂದನ್ನು ಹತ್ತತ್ತು ಬಾರಿ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ. ಇವತ್ತಿನ ಪರಿಸ್ಥಿತಿಯಲ್ಲಿ ಹೆಚ್ಚಿನವರು ಹಗುರವಾದ ಕೆಲಸಗಳನ್ನೇ ಮಾಡುತ್ತಿರುತ್ತಾರೆ. ಅಂತಹವರು ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿಯಲ್ಲಿ ಕಠಿಣ ಕೆಲಸಗಳನ್ನು ಮಾಡಿದಾಗ ಹಲವು ತೊಂದರೆಗಳನ್ನು ಎದುರಿಸುವುದು ಸಾಮಾನ್ಯ. ಆದ್ದರಿಂದ ಪ್ರತಿದಿನವೂ ಒಂದಲ್ಲ ಒಂದು ರೀತಿಯ ವ್ಯಾಯಾಮಗಳನ್ನು ಮಾಡುವ ಮೂಲಕ ದೇಹವನ್ನು ದಂಡಿಸಬೇಕು. ಒಂದಷ್ಟು ದೂರ ವಾಕಿಂಗ್ ಮಾಡುವುದು, ಯೋಗ, ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು ಇಲ್ಲದೆ ಹೋದರೆ ಬೆನ್ನು ನೋವು ಸೇರಿದಂತೆ ಹಲವು ನೋವುಗಳು ಕಾಡಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

Advertisement
Tags :
LatestNewsNewsKannadaಬೆನ್ನು ನೋವು
Advertisement
Next Article