ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೊಡಗಿನಲ್ಲಿ ಜೇನು ಕೃಷಿ ನೇಪಥ‍್ಯಕ್ಕೆ ಸರಿಯಲು ಕಾರಣವೇನು?

ಒಂದು ಕಾಲದಲ್ಲಿ ಕೊಡಗಿನ ಗ್ರಾಮೀಣ ಪ್ರದೇಶದಲ್ಲಿ ಕಾಲಿಟ್ಟಿತ್ತೆಂದರೆ ಎಲ್ಲೆಡೆಯಿಂದಲೂ ಜೇನಿನ ಝೇಂಕಾರ ಕೇಳಿಸುತ್ತಿತ್ತು. ಈ ಸಮಯದಲ್ಲಂತು ಕಾಫಿ ಗಿಡಗಳು ಸೇರಿದಂತೆ ವಿವಿಧ ಮರ, ಬಳ್ಳಿ, ಗಿಡಗಳು ಹೂ ಬಿಟ್ಟಿದ್ದರೆ ಅದರ ತುಂಬೆಲ್ಲಾ ಝೇಂಕರಿಸುತ್ತಾ ಮಕರಂದ ಹೀರುವುದರಲ್ಲಿ ತಲ್ಲೀನವಾದ ಜೇನು ನೊಣಗಳು ಕಾಣಿಸುತ್ತಿದ್ದವು. ಆದರೀಗ ಬದಲಾದ ವಾತಾವರಣ ಅಂತಹದೊಂದು ದೃಶ್ಯಕ್ಕೆ ತೆರೆ ಎಳೆದಿದೆ. ಈಗ ಮೊದಲಿನ ಜೇನಿನ ವೈಭವ ಕಾಣಿಸದಾಗಿದೆ.
01:22 PM Feb 05, 2024 IST | Ashika S

ಒಂದು ಕಾಲದಲ್ಲಿ ಕೊಡಗಿನ ಗ್ರಾಮೀಣ ಪ್ರದೇಶದಲ್ಲಿ ಕಾಲಿಟ್ಟಿತ್ತೆಂದರೆ ಎಲ್ಲೆಡೆಯಿಂದಲೂ ಜೇನಿನ ಝೇಂಕಾರ ಕೇಳಿಸುತ್ತಿತ್ತು. ಈ ಸಮಯದಲ್ಲಂತು ಕಾಫಿ ಗಿಡಗಳು ಸೇರಿದಂತೆ ವಿವಿಧ ಮರ, ಬಳ್ಳಿ, ಗಿಡಗಳು ಹೂ ಬಿಟ್ಟಿದ್ದರೆ ಅದರ ತುಂಬೆಲ್ಲಾ ಝೇಂಕರಿಸುತ್ತಾ ಮಕರಂದ ಹೀರುವುದರಲ್ಲಿ ತಲ್ಲೀನವಾದ ಜೇನು ನೊಣಗಳು ಕಾಣಿಸುತ್ತಿದ್ದವು. ಆದರೀಗ ಬದಲಾದ ವಾತಾವರಣ ಅಂತಹದೊಂದು ದೃಶ್ಯಕ್ಕೆ ತೆರೆ ಎಳೆದಿದೆ. ಈಗ ಮೊದಲಿನ ಜೇನಿನ ವೈಭವ ಕಾಣಿಸದಾಗಿದೆ.

Advertisement

ಒಂದೆರಡು  ದಶಕಗಳ ದಶಕಗಳ ಹಿಂದೆ ಕೊಡಗು ಜೇನು ಕೃಷಿಗೆ ಹೇಳಿ ಮಾಡಿಸಿದ ಪ್ರದೇಶವಾಗಿತ್ತು. ಇಲ್ಲಿನ ಕಾಫಿ, ಏಲಕ್ಕಿ ತೋಟ ಹಾಗೂ ಕಾಡುಗಳಲ್ಲಿರುವ ಹೂವು ಬಿಡುವ ಗಿಡ, ಮರ, ಬಳ್ಳಿಗಳು ಜೇನು ಉತ್ಪಾದನೆಗೆ ಸಹಕಾರಿಯಾಗಿದ್ದವು. ಹೆಚ್ಚಿನ ಬೆಳೆಗಾರರು ಜೇನು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಜೇನುಹುಳುಗಳು ಕಾಡು ಪ್ರದೇಶಗಳ ಮರದ ಪೊಟರೆಯಲ್ಲಿ, ಹುತ್ತ ಹೀಗೆ ತಮಗೆ ಅನುಕೂಲವಾದ ಸ್ಥಳಗಳಲ್ಲಿ ಜನರ ಕಣ್ಣಿಗೆ ಬೀಳದೆ ಡಿಸೆಂಬರ್ ವೇಳೆಗೆ ವಾಸ್ತವ್ಯ ಹೂಡಿ ಜೇನು ಉತ್ಪಾದಿಸಿ ಮೇ ತಿಂಗಳಲ್ಲಿ ಅಂದರೆ ಮುಂಗಾರು ಆರಂಭದ ವೇಳೆಗೆ ತಾವು ಉತ್ಪಾದಿಸಿದ ಜೇನನ್ನು ಕುಡಿದು ವಾಸ್ತವ್ಯ ಬದಲಿಸಿ ಬಿಡುತ್ತಿದ್ದವು.

ಅವತ್ತಿನ ದಿನಗಳಲ್ಲಿ ಜೇನುಪೆಟ್ಟಿಗೆಯನ್ನು ಜೇನು ಮೇಣದಿಂದ ಉಜ್ಜಿ ತಂಪಾದ ಸ್ಥಳದಲ್ಲಿಟ್ಟರೆ ಜೇನು ಹುಳಗಳು  ಬಂದು ಸೇರಿಕೊಳ್ಳುತ್ತಿದ್ದವು. ಮಳೆಗಾಲದಲ್ಲಿ ಜೇನು ಪೆಟ್ಟಿಗೆಯನ್ನು ಬಿಟ್ಟು ಹೋದ ಕುಟುಂಬಗಳು ಡಿಸೆಂಬರ್ ನಂತರ ಬಂದು ಸೇರಿಕೊಳ್ಳುತ್ತಿದ್ದವು. ಇದೆಲ್ಲವೂ ಸ್ವಾಭಾವಿಕವಾಗಿಯೇ ನಡೆಯುತ್ತಿತ್ತು. 1983ರ ವೇಳೆಗೆಲ್ಲ ಕೊಡಗಿನ ಜೇನು ಕೃಷಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಸೆಳೆದಿತ್ತು. ಬಳಿಕ ಒಂದು ದಶಕಗಳ ಕಾಲ ಕೊಡಗಿನಲ್ಲಿ ಜೇನು ಕೃಷಿ ಸಮೃದ್ಧವಾಗಿತ್ತು. ಆದರೆ 1991ರ ವೇಳೆಗೆ ಜೇನು ಹುಳುಗಳಿಗೆ ಥ್ಯಾಸ್ಯಾಕ್ ಬ್ರೂಡ್ ಎಂಬ ಕಾಯಿಲೆ ಕಾಣಿಸಿಕೊಳ್ಳತೊಡಗಿತು. ಪರಿಣಾಮ ರೋಗ ತಗುಲಿದ ಜೇನುನೊಣಗಳು ಸಾವನ್ನಪ್ಪಿ, ಜೇನುಕುಟುಂಬಗಳು ನಾಶವಾಗತೊಡಗಿದವು.

Advertisement

ಈ ರೋಗದಿಂದ ಮರಿಹುಳುಗಳು ಕೋಶಾವಸ್ಥೆಗೆ ಬರುವ ಮುನ್ನವೇ ಸತ್ತು ಹೋಗ ತೊಡಗಿದವು. ಇದರ ಪರಿಣಾಮ  ಜೇನು ಹುಳುಗಳ ಸಂತತಿ ಸದ್ದಿಲ್ಲದೆ ನಾಶವಾಗತೊಡಗಿತ್ತು. ದೊಡ್ಡ ಕುಟುಂಬಗಳೆಲ್ಲ ಚಿಕ್ಕದಾಗತೊಡಗಿದವು. ವರ್ಷದ ಅಂತ್ಯ ಅಥವಾ ಪ್ರಾರಂಭದಲ್ಲಿ ಕೊಡಗಿನತ್ತ ಬರುವ ಜೇನು ಕುಟುಂಬಗಳ ಸಂಖ್ಯೆ ಕಡಿಮೆಯಾಗ ತೊಡಗಿತು. ಇದರಿಂದಾಗಿ ನೂರಾರು ಜೇನುಪೆಟ್ಟಿಗೆಗಳನ್ನಿಟ್ಟುಕೊಂಡು ಕೃಷಿ ಮಾಡುತ್ತಿದ್ದ ಕೃಷಿಕನಿಗೆ ಹೊಡೆತ ಬಿದ್ದಿತ್ತು. ಪೆಟ್ಟಿಗೆಗಳು ಜೇನುಕುಟುಂಬಗಳಿಲ್ಲದೆ ಖಾಲಿಯಾಗಿ ಗೆದ್ದಲು ಹಿಡಿದವು.

ಇನ್ನು ಕೆಲವು ಕಡೆ ಅರಣ್ಯ ಇಲಾಖೆ ನೆಟ್ಟ ಗಾಳಿ ಮರವು ಜೇನುನೊಣಗಳಿಗೆ ಕಂಟಕವಾಗಿ ಪರಿಣಮಿಸಿತು. ಕಾರಣ  ಮರದಲ್ಲಿ ಬರುವ ಅಂಟು ರೀತಿಯ ದ್ರವದ ಮೇಲೆ ಕುಳಿತ ನೊಣಗಳು ಅಂಟಿಕೊಂಡು ಸತ್ತವು. ಜೇನು ಕುಟುಂಬಗಳಲ್ಲಿರುವ ಕೆಲಸಗಾರ ನೊಣಗಳು ಒಂದಲ್ಲ ಒಂದು ಕಾರಣಕ್ಕೆ ನಾಶವಾಗುತ್ತಲೇ ಸಾಗಿದ್ದರಿಂದ ಬಹಳಷ್ಟು ಜನ ಜೇನು ಕೃಷಿಯನ್ನು ಕೈಬಿಟ್ಟುಬಿಟ್ಟರು. ಕೆಲವರು ಜೇನಿಗೆ ತಗುಲಿದ ಥ್ಯಾಸ್ಯಾಕ್ ಬ್ರೂಡ್ ರೋಗವನ್ನು ಹೋಗಲಾಡಿಸಲು ಒಂದಷ್ಟು ಕ್ರಮಗಳನ್ನು ಕೈಗೊಂಡರಾದರೂ ಅದು ಯಶಸ್ಸು ಕಾಣಲಿಲ್ಲ. ಇದೆಲ್ಲದರಿಂದ ಬೇಸತ್ತ ಬಹಳಷ್ಟು ಕೃಷಿಕರು ಜೇನು ಸಾಕಣೆಗೆ ವಿದಾಯ ಹೇಳಿದರು.

ಇವತ್ತು ಕೊಡಗಿನಲ್ಲಿ ಮೊದಲಿನಂತೆ ಜೇನು ಹೇರಳವಾಗಿ ಸಿಗುತ್ತಿಲ್ಲ. ಅದರಲ್ಲೂ ಶುದ್ಧಜೇನಂತು ಇಲ್ಲವೇ ಇಲ್ಲ.  ಮಾರಾಟವಾಗುತ್ತಿರುವ ಜೇನುಗಳ ಪೈಕಿ ಹೆಚ್ಚಿನವು ಕಲಬೆರಕೆಗಳಾಗುತ್ತಿವೆ. ಮುಂದಿನ ದಿನಗಳಲ್ಲಿ ಇಲ್ಲಿನ ಬೆಳೆಗಾರರು ಜೇನು ಕೃಷಿಯತ್ತ ಆಸಕ್ತಿ ವಹಿಸಿ ಜೇನುಕೃಷಿಯನ್ನು ಮಾಡಲು ಮುಂದೆ ಬಂದರೆ ಶುದ್ಧಜೇನನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಈಗಾಗಲೇ ಅರಣ್ಯ ನಾಶವಾಗಿದ್ದು, ಮೊದಲಿನಂತೆ ಕಾಡಿನಲ್ಲಿ ಹೂಬಿಡುವ ಮರಗಳು ಇಲ್ಲವಾಗಿವೆ. ಹೀಗಾಗಿ ಅದು ಸಾಧ್ಯನಾ ಎಂಬ ಪ್ರಶ್ನೆಗಳು ಕೂಡ ಮೇಲೇಳುತ್ತವೆ. ಜತೆಗೆ ಬಂಡವಾಳ ಸುರಿದು ಅದರಿಂದ ಹಣ ಸಂಪಾದಿಸಬಹುದು ಎಂಬ ನಂಬಿಕೆಯೂ ಈ ಕೃಷಿಯಲ್ಲಿ ಇಲ್ಲದಾಗಿದೆ.

Advertisement
Tags :
LatetsNewsNewsKannadaಕಾಫಿ ಗಿಡಕೊಡಗಿನಗ್ರಾಮೀಣ ಪ್ರದೇಶಜೇನು ನೊಣವಾತಾವರಣ
Advertisement
Next Article