ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಎರಡು ದಿನಗಳ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ಶನಿವಾರ ಉದ್ಘಾಟನೆಗೊಂಡಿತು.
05:45 PM Nov 04, 2023 IST | Ramya Bolantoor

ಮಂಗಳೂರು:   ಮಾತೃಭಾಷೆಯ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಅನನ್ಯವಾಗಿದೆ. ಜಿ 20 ಶೃಂಗವೂ ಮಹಿಳಾ ನಾಯಕತ್ವದಲ್ಲಿ ಅಭಿವೃದ್ಧಿಯ ಚಿಂತನೆ ಮಾಡಿದೆ. ಆದರೆ ಮಾತೃಭಾಷೆ ಸಂಸ್ಕೃತಿಯ ವಿಕಾಸದಲ್ಲಿ ಮಹಿಳೆಯರ ಕೊಡುಗೆಯನ್ನೇ ನಿರ್ಲಕ್ಷಿಸಿಕೊಂಡು ಬರಲಾಗಿದೆ ಎಂದು ಬಹು ಭಾಷಾ ಸಾಹಿತಿ ಹೇಮಾ ನಾಯ್ಕ ಹೇಳಿದರು.

Advertisement


ಅವರು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಆವರಣದಲ್ಲಿ ಬಸ್ತಿವಾಮನ ಶೆಣೈ ವೇದಿಕೆಯಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಂವಿಧಾನಿಕವಾಗಿ ನೀಡಲಾಗಿರುವ ಸಮಾನ ಅವಕಾಶಗಳನ್ನೂ ಮೀಸಲಾತಿಯ ರೂಪದಲ್ಲಿ ಜಾರಿಗೊಳಿಸುವುದಕ್ಕೂ ಹಲವು ಅಡ್ಡಿ ಆತಂಕಗಳಿವೆ ಎನ್ನುವುದು ವಿಷಾದನೀಯ. ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ದೇಶ ಒಂದು ಸಂವಿಧಾನ ನಮ್ಮ ಏಕತೆಯ ಸಂಕೇತವಾಗಿತ್ತು. ಆದರೆ ಇಂದು ಎಲ್ಲರೂ ಒಂದಾಗಿ ಹೊಸ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ರೂಪಿಸಲು ಒಂದು ದೇಶ ಒಂದು ಭಾಷೆ ಹೇರುವ ಪ್ರಯತ್ನ ನಡೆದಿದೆ ಎಂದವರು ಹೇಳಿದರು.


ಜಾತ್ಯತೀತತೆ, ಸಂವಿಧಾನ ತತ್ವ, ಸಾಮಾಜಿಕ ಕಾಳಜಿಯೊಂದಿಗೆ ಸಾಂಸ್ಕೃತಿಕ, ಭಾಷಿಕ, ಸಾಮಾಜಿಕ ಹೋರಾಟವನ್ನು ಯುವ ಪೀಳಿಗೆಗೆ ಪರಿಚಯಿಸುವ ಹೊಸ ಅಭಿವ್ಯಕ್ತಿ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಜವಾಬ್ದಾರಿಯನ್ನು ಯುವ ಪೀಳಿಗೆಗೆ ಹಸ್ತಾಂತರಿಸುವ ಮತ್ತು ಅಖಿಲ ಭಾರತ ಕೊಂಕಣಿ ಯೂತ್ ಲೀಗ್ ಸ್ಥಾಪನೆ ಇಂದಿನ ಅಗತ್ಯ ಎಂದು ಸಾಹಿತಿ ಹೇಮಾ ನಾಯಕ್ ಹೇಳಿದರು.
ಸಮ್ಮೇಳನ ಉದ್ಘಾಟಿಸಿದ ಕವಿ, ಕತೆಗಾರ ಉದಯನ್ ವಾಜಪೇಯಿ ಮಾತನಾಡಿ, ಕಲೆ ಮತ್ತು ಸಂಸ್ಕೃತಿ ನಮ್ಮ ದೇಶವನ್ನು ಒಂದಾಗಿಸಿದೆ. ಭಾಷೆಗಳಿಂದ ಒಗ್ಗೂಡಿದ್ದೇವೆ, ಸಣ್ಣ ಸಮುದಾಯವಾದರೂ ಕೊಂಕಣಿಯಲ್ಲಿ ಭಾಷೆಯ ಉತ್ಕರ್ಷ, ಸೃಜನಶೀಲತೆ ಕಾಯ್ದುಕೊಳ್ಳುವಲ್ಲಿ ಉತ್ಸಾಹ ತೋರಿಸಿದೆ. ಲೇಖಕರ ಕರ್ತವ್ಯ ಬರೇ ಅಭಿವ್ಯಕ್ತಿಯಲ್ಲ, ಅದು ಓದುಗರಲ್ಲಿ ನೈತಿಕತೆ, ಸೌಂದರ್ಯ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಾಗಿದೆ ಎಂದರು.
Advertisement


ಅಖಿಲ ಭಾರತ ಕೊಂಕಣಿ ಸಾಹಿತ್ಯ ಪರಿಷತ್ ಅಧ್ಯಕ್ಷ ಅರುಣ್ ಉಭಯಕರ್ ಮಾತನಾಡಿ, ಕಳೆದ 84 ವರ್ಷಗಳಲ್ಲಿ ಪರಿಷತ್ ಮಾಡಿದ ಸೇವೆ, ಸಾಧನೆಯ ಪರಿಣಾಮವಾಗಿ ಕೊಂಕಣಿ ಭಾಷೆ ಮತ್ತು ಭಾಷಿಗರ ಸ್ಥಾನಮಾನ ಬೆಳವಣಿಗೆಯಿಂದ ಹೆಮ್ಮೆ ಅನಿಸಿದೆ ಎಂದರು.
ಈ ಸಂದರ್ಭ ವಿವಿಧ ಲೇಖಕರ 11 ಕೃತಿಗಳು ಹಾಗೂ ಸಮ್ಮೇಳನದ ಸ್ಮರಣ ಸಂಚಿಕೆ ಬಿಂಗಾರು ಲೋಕಾರ್ಪಣೆಗೊಳಿಸಲಾಯಿತು. ಗೋವಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು. ಸಮ್ಮೇಳನ ಸ್ವಾಗತ ಸಮಿತಿ ಉಪಾಧ್ಯಕ್ಷ , ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ, ಸಮ್ಮೇಳನ ಕಾರ್ಯಾಧ್ಯಕ್ಷ ಹೆನ್ರಿ ಮೆಂಡೋನ್ಸಾ ಉಪಸ್ಥಿತರಿದ್ದರು.


ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಮೈಕಲ್ ಡಿಸೋಜ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗೌರೀಶ್ ರೇವಣ್‌ರ್ಕರ್ ವಂದಿಸಿದರು. ಪ್ರಾಧ್ಯಾಪಕ ಅನಂತ ಅಗ್ನಿ ನಿರೂಪಿಸಿದರು. ಮೂಲತಃ ಗೋವಾದ ಆಗಸ್ಟಿನ್ ಅಲ್ಮೇಡಾ ಅವರು ಗಾಂಧಿ ವೇಷಧಾರಿಯಾಗಿ ಸಮ್ಮೇಳನಾಂಗಣದಲ್ಲಿ ಗಮನ ಸೆಳೆದರು. ಉದ್ಘಾಟನಾ ಸಮಾರಂಭಕ್ಕೆ ಮೊದಲು ನಾಗೇಶ್ ಕರ್ಮಾಲಿ ಪ್ರವೇಶ ದ್ವಾರದಿಂದ ಮೆರವಣಿಗೆ ನಡೆಯಿತು. ಉದ್ಘಾಟನಾ ಸಮಾರಂಭದ ಬಳಿಕ ವಿವಿಧ ವಿಚಾರಗಳ ಮೇಲೆ ಪರಿ ಸಂವಾದ್, ಸಾಹಿತ್ಯ ಸಾದರೀಕರಣ, ನಾಟಕ ಪ್ರದರ್ಶನ ನಡೆಯಿತು.

Advertisement
Tags :
NewsKannadaಕೊಂಕಣಿಮಂಗಳೂರು
Advertisement
Next Article