ಫೋಟೋ ತೆಗೆಯಲು ಬಂದ ಅಭಿಮಾನಿಗೆ ಥಳಿಸಿದ ಶಕಿಬ್ ಅಲ್ ಹಸನ್
ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ತಂಡದ ಹಿರಿಯ ಆಲ್ರೌಂಡರ್ ಶಕಿಬ್ ಅಲ್ ಹಸನ್ ಸೆಲ್ಫಿ ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಥಳಿಸಲು ಮುಂದಾಗಿರುವ ಘಟನೆ ನಡೆದಿದೆ.
ಈ ವಿಡಿಯೊ ವೈರಲ್ ಆಗಿದ್ದು ಶಕಿಬ್ ವರ್ತನೆ ಬಗ್ಗೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಆಡುವ ಸಲುವಾಗಿ ಢಾಕಾ ಪ್ರೀಮಿಯರ್ ಲೀಗ್ನಲ್ಲಿ ಆಡಳಿದ್ದಾರೆ.
ಶೇಖ್ ಜಮಾಲ್ ಧನ್ಮೊಂಡಿ ಕ್ಲಬ್ ಪರವಾಗಿ ಆಡುತ್ತಿರುವ ಶಕೀಬ್ ಪಂದ್ಯಕ್ಕೂ ಮುನ್ನ ಸಹ ಆಟಗಾರರ ಜತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ಬಂದು ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ.
ಈ ಅಭಿಮಾನಿಯನ್ನು ಕಂಡ ಕೂಡಲೇ ಕೆರಳಿದ ಶಕೀಬ್, ಇಲ್ಲ ಫೋಟೋ ತೆಗೆಸಿಕೊಳ್ಳಲ್ಲ ಇಲ್ಲಿಂದ ಹೋಗು ಎಂದು ಸೂಚನೆ ನೀಡಿದ್ದಾರೆ. ಆದರೂ ಕೂಡ ಅಭಿಮಾನಿ ಮತ್ತೆ ಮತ್ತೆ ಫೋಟೊ ತೆಗೆಯಲು ಒತ್ತಾಯಿಸಿದಾಗ, ಅವರ ಕುತ್ತಿಗೆಗೆ ಕೈಹಾಕಿದ ಶಾಕಿಬ್ ಹೊಡೆಯಲು ಮುಂದಾದರು. ಈ ವಿಡಿಯೊ ಇದೀಗ ವೈರಲ್ ಆಗುತ್ತಿದೆ.
ಶಕಿಬ್ ಅವರು ಈ ರೀತಿ ತಾಳ್ಮೆ ಕಳೆದುಕೊಂಡಿರುವುದು ಇದೇ ಮೊದಲೇನಲ್ಲ ಹಲವು ಬಾರಿ ಅವರು ಮೈದಾನದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಂಪೈರ್ ಅವರೊಂದಿಗೆ ಶಕಿಬ್ ಹಲವು ಬಾರಿ ವಾಗ್ವಾದಕ್ಕೆ ಇಳಿದ ಹಲವು ನಿದರ್ಶನಗಳಿವೆ. ಕಳೆದ ಬಾರಿಯ ಬಾಂಗ್ಲಾ ಪ್ರೀಮಿಯರ್ ಲೀಗ್ನಲ್ಲಿ ಅಂಪೈರ್ ಅವರು ಔಟ್ ನೀಡಿಲ್ಲ ಎಂಬ ಕಾರಣಕ್ಕೆ ಶಬಿಕ್ ವಿಕೆಟ್ಗೆ ಕಾಲಿನಿಂದ ಒದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.