For the best experience, open
https://m.newskannada.com
on your mobile browser.
Advertisement

ಕೌಶಲ್ಯಯುತ ಸ್ಪರ್ಧೆಗಳಿಂದ ಮಾರುಕಟ್ಟೆ ಪ್ರಜ್ಞೆಯ ವಿಸ್ತರಣೆ: ಡಾ.ಬಿ.ಎ.ಕುಮಾರ ಹೆಗ್ಡೆ

ವಾಣಿಜ್ಯಿಕ ವ್ಯವಹಾರಗಳ ಶೈಕ್ಷಣಿಕ ಪಠ್ಯಗಳ ತಿಳುವಳಿಕೆಯ ಆಧಾರದಲ್ಲಿ ಮಾರುಕಟ್ಟೆಯ ಟ್ರೆಂಡ್‌ಗೆ ಅನುಗುಣವಾಗಿ ಯೋಚಿಸುವ ಸಾಮರ್ಥ್ಯ ರೂಢಿಸುವಲ್ಲಿ ಕೌಶಲ್ಯಸಂಬಂಧಿತ ಅಂತರ್‌ಕಾಲೇಜು ಮಟ್ಟದ ಸ್ಪರ್ಧೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ನುಡಿದರು.
01:42 PM Apr 06, 2024 IST | Ashika S
ಕೌಶಲ್ಯಯುತ ಸ್ಪರ್ಧೆಗಳಿಂದ ಮಾರುಕಟ್ಟೆ ಪ್ರಜ್ಞೆಯ ವಿಸ್ತರಣೆ  ಡಾ ಬಿ ಎ ಕುಮಾರ ಹೆಗ್ಡೆ

ಉಜಿರೆ : ವಾಣಿಜ್ಯಿಕ ವ್ಯವಹಾರಗಳ ಶೈಕ್ಷಣಿಕ ಪಠ್ಯಗಳ ತಿಳುವಳಿಕೆಯ ಆಧಾರದಲ್ಲಿ ಮಾರುಕಟ್ಟೆಯ ಟ್ರೆಂಡ್‌ಗೆ ಅನುಗುಣವಾಗಿ ಯೋಚಿಸುವ ಸಾಮರ್ಥ್ಯ ರೂಢಿಸುವಲ್ಲಿ ಕೌಶಲ್ಯಸಂಬಂಧಿತ ಅಂತರ್‌ಕಾಲೇಜು ಮಟ್ಟದ ಸ್ಪರ್ಧೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ನುಡಿದರು.

Advertisement

ಉಜಿರೆಯ ಎಸ್‌ಡಿ‌ಎಂ ಕಾಲೇಜಿನ‌ ಸಮ್ಯಕ್ ದರ್ಶನ ಸಭಾಂಗಣದಲ್ಲಿ ವಾಣಿಜ್ಯ ವಿಭಾಗ ಹಾಗೂ ವ್ಯವಹಾರ ಆಡಳಿತ ವಿಭಾಗಗಳ ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಅಂತರಕಾಲೇಜು ವಾಣಿಜ್ಯ ಹಾಗೂ ವ್ಯವಹಾರ ಕಾರ್ಯಕ್ರಮವೆಂಚುರಾ - 2024 ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯಿಕ ಕ್ಷೇತ್ರವು ವ್ಯಾವಹಾರಿಕ ಕೌಶಲ್ಯಗಳ ನೆರವಿನೊಂದಿಗೆ ವಿಸ್ತೃತವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಪಠ್ಯಗಳು ನೀಡುವ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಕೌಶಲ್ಯ ರೂಢಿಯಾಗಬೇಕಾದರೆ ವಾಣಿಜ್ಯ, ವ್ಯವಹಾರ ಅಧ್ಯಯನ ವಿಭಾಗಗಳು ಆಯೋಜಿಸುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಪ್ರಾಯೋಗಿಕ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಅಂತರ್‌ಕಾಲೇಜು ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುವುದರೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.

Advertisement

ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಎಸ್.ಎನ್. ಕಾಕತ್ಕರ್ ಮಾತನಾಡಿದರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಪ್ರಯೋಗಿಕ ಅನುಭವಗಳ ಜೊತೆಯಲ್ಲಿ ಸಂವಹನ ಕೌಶಲ್ಯ, ನಾಯಕತ್ವ, ಬಿಕ್ಕಟ್ಟು ನಿರ್ವಹಣೆಗಳನ್ನು ಕಲಿಸುವಲ್ಲಿ ಸಹಾಯ ಮಾಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 15 ಕಾಲೇಜುಗಳ 20 ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಡಾ. ರತ್ನವತಿ ಕೆ., ಕಾರ್ಯಕ್ರಮ ಸಂಯೋಜಕರಾದ ವಿನುತ ಡಿ.ಎಮ್, ಗುರುರಾಜ್ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಆದರ್ಶ್ ಬಿ‌.ಕೆ., ಸುವಿತ್ ಶೆಟ್ಟಿ ಉಪಸ್ಥಿತರಿದ್ದರು. ವ್ಯವಹಾರ ಆಡಳಿತ ವಿಭಾಗದ ಡೀನ್ ಹಾಗೂ ಮುಖ್ಯಸ್ಥರಾದ ಶಾಕುಂತಲ ಸ್ವಾಗತಿಸಿ, ವಿದ್ಯಾರ್ಥಿ ಪ್ರತಿನಿಧಿ ಶರಧಿ ಹೊಳ್ಳ ವಂದಿಸಿದರು. ಜೀವನ್ ಎಸ್.ಪಿ, ಜಯಸೂರ್ಯ ನಿರೂಪಿಸಿದರು.

Advertisement
Tags :
Advertisement