ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಣ್ಮರೆಯಾಗುತ್ತಿರುವ ಜಟಕಾ ಕುದುರೆ ಟಾಂಗಾಗಳು

ನಗರಗಳಲ್ಲಿ ಪ್ರಯಾಣಕ್ಕೆ ಆಟೊ, ಟ್ಯಾಕ್ಸಿ ಇಲ್ಲದಿದ್ದ ಕಾಲದಲ್ಲಿ ಜನತೆ ಬಳಸುತ್ತಿದ್ದುದೇ ಟಾಂಗಾಗಳನ್ನು. ಟಾಂಗಾ ಎಂದರೆ ಒಂಟಿ ಕುದುರೆಯಿಂದ ಎಳೆಯಲ್ಪಡುವ ಗಾಡಿ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಸಾರಿಗೆಗಾಗಿ ಇದನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಲಬುರಗಿಯೂ ಇದಕ್ಕೆ ಹೊರತಾಗಿದ್ದಿಲ್ಲ. ಆದರೆ ಈಗ ನಗರದಲ್ಲಿ ಹುಡುಕಿದರೆ ಬೆರಳೆಣಿಕೆಯಷ್ಟು ಕುದುರೆಗಾಡಿಗಳು ಮಾತ್ರ ಸಿಗುತ್ತವೆ.
04:14 PM Nov 23, 2023 IST | Ashika S

ನಗರಗಳಲ್ಲಿ ಪ್ರಯಾಣಕ್ಕೆ ಆಟೊ, ಟ್ಯಾಕ್ಸಿ ಇಲ್ಲದಿದ್ದ ಕಾಲದಲ್ಲಿ ಜನತೆ ಬಳಸುತ್ತಿದ್ದುದೇ ಟಾಂಗಾಗಳನ್ನು. ಟಾಂಗಾ ಎಂದರೆ ಒಂಟಿ ಕುದುರೆಯಿಂದ ಎಳೆಯಲ್ಪಡುವ ಗಾಡಿ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಸಾರಿಗೆಗಾಗಿ ಇದನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಲಬುರಗಿಯೂ ಇದಕ್ಕೆ ಹೊರತಾಗಿದ್ದಿಲ್ಲ. ಆದರೆ ಈಗ ನಗರದಲ್ಲಿ ಹುಡುಕಿದರೆ ಬೆರಳೆಣಿಕೆಯಷ್ಟು ಕುದುರೆಗಾಡಿಗಳು ಮಾತ್ರ ಸಿಗುತ್ತವೆ.

Advertisement

ಕುದುರೆಗಳು ಟಕ್‌.. ಟಕ್‌.. ಸದ್ದು ಮಾಡುತ್ತಾ ಸುತ್ತಲಿನವರ ಗಮನ ಸೆಳೆಯುತ್ತಾ ಪ್ರಯಾಣಿಕರನ್ನು ಹೊತ್ತು ರಸ್ತೆಯಲ್ಲಿ ವೈಭವದಿಂದ ಸಂಚರಿಸುತ್ತಿದ್ದವು. ವಿಶೇಷವಾಗಿ ಟಾಂಗಾದಲ್ಲಿ ಸಂಚರಿಸಲೆಂದೇ ಅನೇಕ ಪ್ರವಾಸಿಗರು ಬರುತ್ತಿದ್ದರು. ಆದರೆ ಕಾಲ ಬದಲಾದಂತೆ ಆಧುನಿಕತೆಯ ಸ್ಪರ್ಶದಿಂದಾಗಿ ಟಾಂಗಾ ಅಬ್ಬರ ಮಾಯವಾಗಿದೆ. ಹೀಗಾಗಿ ಪ್ರಸ್ತುತ ಟಾಂಗಾಗಳು ಪ್ರಯಾಣಿಸಲು ಮನರಂಜನೆಯ ಒಂದು ರೂಪವಾಗಿ ಮಾತ್ರ ಉಳಿದಿವೆ.

ಎರಡು ದಶಕಗಳ ಹಿಂದೆ ನಗರದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಟಾಂಗಾಗಳು ಇದ್ದವು ಎನ್ನುತ್ತಾರೆ 40 ವರ್ಷಗಳಿಂದ ಟಾಂಗಾ ಓಡಿಸುತ್ತಿರುವ ಗಪೂರ್‌ಸಾಬ. ಅವುಗಳ ಸಂಖ್ಯೆ ಈಗ 20 ಉಳಿದಿರಬಹುದು. ಆಟೊಗಳ ಹಾವಳಿಯಿಂದಾಗಿ ಟಾಂಗಾಗಳು ನೇಪಥ್ಯಕ್ಕೆ ಸರಿದಿವೆ. ಟಾಂಗಾ ಓಡಿಸುತ್ತಿದ್ದ ಎಷ್ಟೋ ಕುಟುಂಬಗಳ ಜನರೇ ಈಗಾ ಆಟೊ ಓಡಿಸುತ್ತಿದ್ದಾರೆ. ಇನ್ನು ಉಳಿದ ಟಾಂಗಾವಾಲಾಗಳು ಇದು ನಮ್ಮ ಗುರುತು. ನಮ್ಮ ಹಿರಿಯರು ಇದನ್ನೇ ಮಾಡಿಕೊಂಡು ಬರುತ್ತಿದ್ದರು. ಹೀಗಾಗಿ ಮುಂದುವರಿಸಿದ್ದೇವೆ ಎನ್ನುತ್ತಾರೆ.

Advertisement

ನಗರದ ಖಾಜಾ ಬಂದಾ ನವಾಜ ದರ್ಗಾದ ಬಳಿ ಕೆಲ ಟಾಂಗಾಗಳು ಪ್ರವಾಸಿಗರಿಗಾಗಿ ಕಾದು ನಿಂತಿರುತ್ತವೆ. ₹500 ಕೊಟ್ಟರೆ 5 ದರ್ಗಾಗಳನ್ನು ಸುತ್ತಾಡಿಸಿಕೊಂಡು ಬರುತ್ತಾರೆ. 'ಇಲ್ಲಿನ ಪ್ರಯಾಣಿಕರಂತೂ ಟಾಂಗಾ ಹತ್ತುವುದೇ ಇಲ್ಲ. ಪ್ರವಾಸಿಗರೇ ನಮಗೆ ಆಧಾರ. ಆದರೆ ನಗರದಲ್ಲಿ ಪ್ರವಾಸೋದ್ಯಮ ಕಡಿಮೆ ಇರುವುದರಿಂದ ಅವರೂ ಬರುವುದು ಅಷ್ಟಕ್ಕಷ್ಟೇ. ದಿನಕ್ಕೆ ಒಂದು ಗಿರಾಕಿ ಸಿಕ್ಕರೆ ಅದೇ ಹೆಚ್ಚು. ಒಮ್ಮೊಮ್ಮೆ 4 ದಿನಕ್ಕೊಂದು ಗಿರಾಕಿ ಸಿಗುತ್ತದೆ. ನಮ್ಮ ಪರಿಸ್ಥಿತಿ ಯಾರಿಗೂ ಬೇಡ' ಎಂದು ಬೇಸರಿಸಿಕೊಳ್ಳುತ್ತಾರೆ ಅಬ್ದುಲ್‌ ಕರೀಂಸಾಬ.

'ಇನ್ನು ಕೋವಿಡ್‌ ಕಾಲದಲ್ಲಂತೂ ನಮ್ಮ ಪರಿಸ್ಥಿತಿ ಗಂಭೀರವಾಗಿತ್ತು. ಆಟೊ ಚಾಲಕರಿಗೆ, ಕ್ಯಾಬ್‌ ಚಾಲಕರಿಗೆ ಸರ್ಕಾರ ನೆರವಿಗೆ ಬಂತು, ನಮ್ಮತ್ತ ತಿರುಗಿಯೂ ನೋಡಲಿಲ್ಲ. ಸರ್ಕಾರ, ಪಾಲಿಕೆ, ಪ್ರವಾಸೋದ್ಯಮ ಇಲಾಖೆ ಯಾವುದರಿಂದಲೂ ನಮಗೆ ನೆರವು ಸಿಗಲಿಲ್ಲ, ಸಿಗುವುದೇ ಇಲ್ಲ. ನಮ್ಮಸಂಪಾದನೆಯಲ್ಲಿ ಅರ್ಧಕ್ಕರ್ಧ ಕುದುರೆಗೇ ಖರ್ಚು ಮಾಡುತ್ತೇವೆ. ಉಳಿದ ದುಡ್ಡಲ್ಲಿ ಮನೆ ನಡೆಸುವುದು ಕಷ್ಟ. ಹೀಗಾಗಿ ನಮ್ಮ ಮಕ್ಕಳು ಕುದುರೆ ಸಹವಾಸ ಬಿಟ್ಟು ಬೇರೆ ಉದ್ಯೋಗದ ಮೊರೆ ಹೋಗಿದ್ದಾರೆ' ಎಂದರು ಜಮೀಲ್‌ ಸಾಬ.

ಟಾಂಗಾವಾಲಾಗಳಿಗೆ ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಪಾಲಿಕೆ ಯಾವುದರಿಂದಲೂ ಎಳ್ಳಷ್ಟೂ ಸೌಲಭ್ಯಗಳು ಇಲ್ಲ. ಇವರು ಕುದುರೆಗೆ ಹುಲ್ಲನ್ನೂ ದುಡ್ಡು ಕೊಟ್ಟೇ ಖರೀದಿಸಬೇಕಿದೆ. ಹೀಗಾಗಿ ಒಂದು ಕಾಲದಲ್ಲಿ ಸಂಚಾರಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದ ಟಾಂಗಾ ಗಾಡಿಗಳು ಈಗ ಕಣ್ಮರೆಯಾಗುತ್ತಿವೆ. ಅವನತಿ ಅಂಚಿನಲ್ಲಿರುವ ಟಾಂಗಾ ಸಂಸ್ಕೃತಿ ಉಳಿವಿಗೆ ಜಿಲ್ಲಾಡಳಿತ ಹೊಸ ಯೋಜನೆ ಕೈಗೊಳ್ಳಬೇಕಿದೆ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬಹುದು ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯವರು.

Advertisement
Tags :
LatestNewsNewsKannadaಆಟೊಕುದುರೆಟಾಂಗಾಟ್ಯಾಕ್ಸಿಬಾಂಗ್ಲಾದೇಶಭಾರತ
Advertisement
Next Article