For the best experience, open
https://m.newskannada.com
on your mobile browser.
Advertisement

ಇಂದು ಕನಕದಾಸ ಜಯಂತಿ: ಈ ದಿನ ಯಾಕೆ ವಿಶೇಷ ಗೊತ್ತಾ?

ಇಂದು ನವೆಂಬರ್‌ 30, ಕನಕದಾಸ ಜಯಂತಿ. 2008ರಿಂದ ಪ್ರತಿ ವರ್ಷವೂ ಕರ್ನಾಟಕ ಸರ್ಕಾರ ಈ ವಿಶೇಷ ದಿನವನ್ನು ಆಚರಿಸುತ್ತಿದೆ. ಈ ದಿನ ಸರ್ಕಾರಿ ರಜೆ ಘೋಷಿಸಲಾಗಿದೆ. ಶಾಲೆಗಳಲ್ಲಿ ಕೂಡಾ ಕನಕದಾಸ ಜಯಂತಿ ಆಚರಿಸಲಾಗುತ್ತಿದೆ. 1509 ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ಬಾಡ ಗ್ರಾಮದಲ್ಲಿ ಅವರು ಜನಿಸಿದರು. ಕನಕದಾಸರ ತಂದೆ ಹೆಸರು ಬೀರಪ್ಪ ನಾಯಕ, ತಾಯಿ ಬಚ್ಚಮ್ಮ.
11:47 AM Nov 30, 2023 IST | Ashitha S
ಇಂದು ಕನಕದಾಸ ಜಯಂತಿ  ಈ ದಿನ ಯಾಕೆ ವಿಶೇಷ ಗೊತ್ತಾ

ಇಂದು ನವೆಂಬರ್‌ 30, ಕನಕದಾಸ ಜಯಂತಿ. 2008ರಿಂದ ಪ್ರತಿ ವರ್ಷವೂ ಕರ್ನಾಟಕ ಸರ್ಕಾರ ಈ ವಿಶೇಷ ದಿನವನ್ನು ಆಚರಿಸುತ್ತಿದೆ. ಈ ದಿನ ಸರ್ಕಾರಿ ರಜೆ ಘೋಷಿಸಲಾಗಿದೆ. ಶಾಲೆಗಳಲ್ಲಿ ಕೂಡಾ ಕನಕದಾಸ ಜಯಂತಿ ಆಚರಿಸಲಾಗುತ್ತಿದೆ. 1509 ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ಬಾಡ ಗ್ರಾಮದಲ್ಲಿ ಅವರು ಜನಿಸಿದರು. ಕನಕದಾಸರ ತಂದೆ ಹೆಸರು ಬೀರಪ್ಪ ನಾಯಕ, ತಾಯಿ ಬಚ್ಚಮ್ಮ.

Advertisement

ಕನಕದಾಸರ ಮೊದಲ ಹೆಸರು ತಿಮ್ಮಪ್ಪ ನಾಯಕ. ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಹುಟ್ಟಿದ್ದರಿಂದ ತಂದೆ ತಾಯಿ, ಮಗನಿಗೆ ತಿಮ್ಮಪ್ಪ ಎಂದೇ ಕರೆಯುತ್ತಿದ್ದರು. ತಂದೆ ಬೀರಪ್ಪ ನಾಯಕ ಸೇನಾಧಿಪತಿಯಾಗಿದ್ದರಿಂದ ಕನಕದಾಸರಿಗೆ ಬಾಲ್ಯದಲ್ಲೇ ಅಕ್ಷರಾಭ್ಯಾಸದ ಜೊತೆಗೆ ಕತ್ತಿವರಸೆ , ಕುದುರೆ ಸವಾರಿಯನ್ನು ಕೂಡಾ ಕಲಿತರು. ಬಾಲ್ಯದಲ್ಲೇ ತಂದೆ ತಾಯಿ ನಿಧನರಾದ್ದರಿಂದ ತಿಮ್ಮಪ್ಪನಾಯಕ ಚಿಕ್ಕ ವಯಸ್ಸಿನಲ್ಲೇ ಬಂಕಾಪುರ ಪಾಂತ್ಯಕ್ಕೆ ಡಣ್ಣಾಯಕನಾದರು. ಒಮ್ಮೆ ತಿಮ್ಮಪ್ಪ ನಾಯಕ ಜೀರ್ಣೋದ್ಧಾರ ಕೆಲಸ ಮಾಡುವಾಗ ಅವರಿಗೆ ಭೂಮಿಯಲ್ಲಿ ಬಂಗಾರ ದೊರೆತ ಕಾರಣ ಆಗಿನಿಂದ ಜನರು ಅವರನ್ನು ಕನಕ ನಾಯಕ ಎಂದು ಕರೆಯಲು ಆರಂಭಿಸಿದರು.

ಶತ್ರುಗಳ ಜೊತೆ ಯುದ್ಧದಲ್ಲಿ ಕನಕನಾಯಕನಿಗೆ ದೊಡ್ಡ ಪೆಟ್ಟಾದರೂ ಅವರು ಪಾರಾದರು. ತಾವು ಆರಾಧಿಸುತ್ತಿದ್ದ ಕಾಗಿನೆಲೆ ಆದಿಕೇಶವನೇ ನನ್ನನ್ನು ಕಾಪಾಡಿದ್ದು ಎಂಬ ನಂಬಿಕೆಯಿಂದ ಅಂದಿನಿಂದ ಕನಕನಾಯಕ ಸೈನ್ಯದ ಕೆಲಸ ಬಿಟ್ಟು ಹರಿದಾಸ ಪಂಥ ಸೇರಿಕೊಂಡರು. ಕನಕ ನಾಯಕ, ಮುಂದೆ ಕನಕದಾಸರಾಗಿ ಬದಲಾಗುತ್ತಾರೆ.

Advertisement

ಇನ್ನು ವ್ಯಾಸರಾಯರ ಶಿಷ್ಯರಾದ ನಂತರ ಅವರ ಸಲಹೆ ಮೇರೆಗೆ ಕನಕದಾಸರು ಒಮ್ಮೆ ಕೃಷ್ಣಮಠಕ್ಕೆ ಶ್ರೀಕೃಷ್ಣನ ದರ್ಶನಕ್ಕೆ ಹೋದರು. ಆದರೆ ಅವರು ಕೆಳಜಾತಿಯವರು ಎಂಬ ಕಾರಣಕ್ಕೆ ದೇವಸ್ಥಾನದಲ್ಲಿದ್ದವರು ಅವರನ್ನು ಒಳಗೆ ಬಿಟ್ಟಿಲ್ಲ. ಅದೇ ನೋವಿನಿಂದ ಕನಕದಾಸರು ದೇವಸ್ಥಾನದ ಹಿಂಭಾಗ ನಿಂತು ಕೃಷ್ಣನನ್ನು ಪ್ರಾರ್ಥಿಸಿದರು. ಅವರ ಭಕ್ತಿಗೆ ಕೃಷ್ಣನು ಒಲಿದು ಗೋಡೆ ಒಡೆದು ಕನಕದಾಸರಿಗೆ ದರ್ಶನ ನೀಡಿದನು. ಅದೇ ಕಿಂಡಿ ಈಗ ಕನಕನ ಕಿಂಡಿ ಎಂದು ಉಡುಪಿಯಲ್ಲಿ ಪ್ರಸಿದ್ಧವಾಗಿದೆ.

ಕನಕದಾಸರು ಕಾಗಿನೆಲೆಯ ಆದಿಕೇಶವರಾಯ ಅಂಕಿತ ನಾಮದಿಂದ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ, ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಸಂಗೀತಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಜೊತೆಗೆ ಕಾವ್ಯಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಪ್ರಮುಖವಾದುದು. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಜಾತಿವಾದ, ವರ್ಣಭೇದ ಹಾಗೂ ಮೂಢನಂಬಿಕೆಗಳನ್ನು ಖಂಡಿಸಿದ್ದಾರೆ. 16ನೇ ಶತಮಾನ ದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು.

ತಮ್ಮ ಸಾಹಿತ್ಯ, ಕೀರ್ತನೆಗಳ ಮೂಲಕ ಅವರು ಇಂದಿಗೂ ನಮ್ಮೆಲ್ಲರ ಮನಸ್ಸಿನಲ್ಲಿ ಗೌರವಯುತ ಸ್ಥಾನ ಪಡೆದಿದ್ದಾರೆ.

Advertisement
Tags :
Advertisement